ಬೆಂಗಳೂರು,ಸೆ.14- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ಪುನಾರಚನೆಯಾಗದ ಕಾರಣ ಮುನಿಸಿಕೊಂಡಿರುವ ಅನೇಕ ಆಕಾಂಕ್ಷಿಗಳು ಕಲಾಪದತ್ತ ಮುಖ ಮಾಡದೆ ಸದನದಿಂದ ದೂರ ಉಳಿದಿದ್ದಾರೆ. ಮಳೆಗಾಲದ ಅಧಿವೇಶನ ಮೂರನೇ ದಿನಕ್ಕೆ ಕಾಲಿಟ್ಟಿದ್ದರೂ ಆಡಳಿತಾರೂಢ ಬಿಜೆಪಿಯ ಅನೇಕ ಶಾಸಕರು ಕಲಾಪದತ್ತ ಮುಖ ಮಾಡದೆ ಮುನಿಸಿಕೊಂಡಿದ್ದಾರೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಎಂ.ಪಿ.ರೇಣುಕಾಚಾರ್ಯ,
ಶಾಸಕರಾದ ತಿಪ್ಪಾರೆಡ್ಡಿ, ಕರುಣಾಕರ ರೆಡ್ಡಿ , ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಾಮನಿ, ರಾಜುಗೌಡ ನಾಯಕ್ ಸೇರಿದಂತೆ ಅನೇಕರು ಸದನದ ಕಡೆ ತಲೆಯನ್ನೇ ಹಾಕಿಲ್ಲ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಂಗಳವಾರ ಸದನಕ್ಕೆ ಬಂದು ಹಾಜರಾತಿಗೆ ಸಹಿ ಹಾಕಿ ಬಂದಷ್ಟೇ ವೇಗದಲ್ಲಿ ಕ್ಷೇತ್ರಕ್ಕೆ ಹಿಂತಿರುಗಿದ್ದಾರೆ. ಗುತ್ತಿಗೆದಾರನಿಗೆ ಕಮೀಷನ್ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಕರಣ ಸಂಬಂಧ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು.
ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ 200 ಕೋಟಿ ರೂ. ಡ್ರಗ್ಸ್ ವಶ, 6 ಪಾಕ್ ಪ್ರಜೆಗಳ ಬಂಧನ
ಯಾವಾಗಲೂ ಸದನಕ್ಕೆ ಹಾಜರಾಗಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ಈಶ್ವರಪ್ಪ ಗೈರುಹಾಜರಿ ಸದನದಲ್ಲಿ ಎದ್ದು ಕಾಣುತ್ತಿದೆ. ಅತ್ಯಾಚಾರ ಸಿಡಿ ಪ್ರಕರಣದಲ್ಲಿ ಸಿಲುಕಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಲಾಪದಲ್ಲಿ ಯಾವಾಗ ಭಾಗಿಯಾಗಿದ್ದಾರೆ ಎಂಬ ಸುತಾರಾಂ ಅವರೇ ಮರೆತುಬಿಟ್ಟಂತ್ತಿದೆ. ಏಕೆಂದರೆ ಹಲವು ಅಧಿವೇಶನಗಳಿಗೆ ಅವರು ಸೌಜನ್ಯಕ್ಕಾದರೂ ಬಂದಿಲ್ಲ.
ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಈ ತಿಂಗಳ ಪ್ರಾರಂಭದಲ್ಲಿ ಸಚವ ಸಂಪುಟ ವಿಸ್ತರಣೆ/ಪುನಾರಚನೆ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಚುನಾವಣಾ ವರ್ಷವಾಗಿರುವುದರಿಂದ ಕೆಲವು ಹಿರಿಯರನ್ನು ಕೈಬಿಟ್ಟು ಸಂಘಟನೆ ಹಿನ್ನಲೆಯಿಂದ ಬಂದವರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಿತ್ತು.
ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ನೀಡಿದ ಲಕ್ಷ್ಮಿ
ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಬಾರಿ ದೆಹಲಿಗೆ ಹೋದರೂ ವರಿಷ್ಠರು ಮಾತ್ರ ಹಸಿರುನಿಶಾನೆ ಕೊಟ್ಟಿರಲಿಲ್ಲ. ಕಳೆದ ವಾರ ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅವರಿಂದ ತೆರವಾಗಿರುವ ಸ್ಥಾನ ಸೇರಿದಂತೆ ಸದ್ಯಕ್ಕೆ ಸಂಪುಟದಲ್ಲಿ 6 ಸ್ಥಾನ ಖಾಲಿ ಉಳಿದಿವೆ.
ಡಾ.ಕೆ.ಸುಧಾಕರ್, ಅಶ್ವಥ್‍ನಾರಾಯಣ ಸೇರಿದಂತೆ ಅನೇಕರಿಗೆ ಹೆಚ್ಚುವರಿ ಖಾತೆಗಳನ್ನು ನೀಡಿರುವುದು ಶಾಸಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಜೊತೆಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ 8 ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2022)
ಮುಂದಿನ ವರ್ಷ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರ ಮತ್ತು ಸಂಘಟನೆಗೆ ಅನುಕೂಲವಾಗುವಂತೆ ಸಂಪುಟ ಪುನಾರಚನೆ ಮಾಡಬೇಕೆಂಬುದು ಬಹುತೇಕರ ಆಗ್ರಹವಾಗಿತ್ತು. ಆದರೆ ಸಿಎಂ ಇದಕ್ಕೆ ಒಲವು ತೋರಿಸದಿರುವುದು ಸ್ವತಃ ಹೈಕಮಾಂಡ್ ಒಪ್ಪಿಗೆ ಕೊಡದಿರುವುದು ಆಕಾಂಕ್ಷಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಹೀಗಾಗಿ ಬಹುತೇಕ ಶಾಸಕರು ಸದನದ ಕಡೆ ಮುಖ ಮಾಡದೆ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.