ಖಾತೆ ಹಂಚಿಕೆ ಮಾಡಿದ ಸಿಎಂ, ಯಾರಿಗೆ ಯಾವ ಖಾತೆ..? ಇಲ್ಲಿದೆ ಫುಲ್ ಡೀಟೇಲ್ಸ್

Spread the love

ಬೆಂಗಳೂರು,ಫೆ.10- ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಖಾತೆ ಹಂಚಿಕೆ ಬಿಕ್ಕಟ್ಟು ಬಗೆಹರಿದು, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ನಿರೀಕ್ಷೆಯಂತೆ ಜಲಸಂಪನ್ಮೂಲ ಖಾತೆಯನ್ನು ರಮೇಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆ.  ಖಾತೆಗಳನ್ನು ಹಂಚಿಕೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕಳುಹಿಸಿಕೊಟ್ಟಿದ್ದರು. ಈ ಪಟ್ಟಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿರ್ವಹಿಸಿದ್ದ ಖಾತೆಯನ್ನೇ ನೀಡಬೇಕೆಂದು ಪಟ್ಟು ಹಿಡಿದಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಅದೇ ಖಾತೆಯನ್ನು ನೀಡುವ ಮೂಲಕ ಭಿನ್ನಮತಕ್ಕೆ ಅಪಸ್ವರವಿಲ್ಲದಂತೆ ಸಿಎಂ ಎಚ್ಚರ ವಹಿಸಿದ್ದಾರೆ. ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‍ಗೆ ಕೇಳಿದ ಖಾತೆಯನ್ನು ನೀಡಲಾಗಿಲ್ಲ.
ಬದಲಿಗೆ ಅವರಿಗೆ ಅರಣ್ಯ ಖಾತೆಯನ್ನು ನೀಡಲಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಮೇಲೆ ಕಣ್ಣಿಟ್ಟಿದ್ದ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್‍ಗೆ ಸಹಕಾರ ಖಾತೆ, ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್‍ಗೆ ಅವರಿಷ್ಟದಂತೆ ನಗರಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ವಹಿಸಲಾಗಿದೆ.  ಸಣ್ಣ ನೀರಾವರಿ ಖಾತೆ ಮೇಲೆಕಣ್ಣಿಟ್ಟಿದ್ದ ಕೆ.ಆರ್.ಪೇಟೆಯ ಶಾಸಕ ನಾರಾಯಣಗೌಡ ಅವರಿಗೆ ಪೌರಾಡಳಿತ ಮತ್ತು ತೋಟಗಾರಿಕೆ ಖಾತೆಯನ್ನು ನೀಡಿದ್ದರೆ,ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‍ಗೆ ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಬಳಿ ಇದ್ದ ಹಾಗೂ ಅವರ ನಿರೀಕ್ಷೆ ಮಾಡಿದ್ದ ವೈದ್ಯಕೀ ಶಿಕ್ಷಣ ಖಾತೆಯನ್ನು ನೀಡಲಾಗಿದೆ.

ಲೋಕೋಪಯೋಗಿ ಇಲ್ಲವೇ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್‍ಗೆ ಆಹಾರ ಮತ್ತು ನಾಗರಿಕ ಪೂರೈಕೆ, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ, ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್‍ಗೆ ಕಾರ್ಮಿಕ ಇಲಾಖೆ, ಕಾಗವಾಡದ ಶ್ರೀಮಂತ್ ಪಾಟೀಲ್‍ಗೆ ಜವಳಿ ಖಾತೆ ನೀಡಲಾಗಿದೆ.

ಕೆಲವು ಸಚಿವರಿಗೆ ನಿರೀಕ್ಷಿತ ಖಾತೆಗಳು ಸಿಕ್ಕಿಲ್ಲವಾದರೂ ಅವರ ಅನುಭವ, ಸಾಮಥ್ರ್ಯ, ಸಂಘಟನಾ ಚಾತುರ್ಯ ಎಲ್ಲವನ್ನೂ ಪರಿಗಣಿಸಿ ಖಾತೆಗಳ ಹೊಣೆಗಾರಿಕೆ ನೀಡಲಾಗಿದೆ.
ಬೆಂಗಳೂರು ನಗರಾಭಿವೃದ್ದಿ , ಇಂಧನ, ವಾರ್ತಾ ಮತ್ತು ಪ್ರಸಾರ ಖಾತೆ, ಕೃಷಿ ಸೇರಿದಂತೆ ಕೆಲವು ಪ್ರಮುಖ ಖಾತೆಗಳನ್ನು ನೂತನ ಸಚಿವರಿಗೆ ನೀಡದೇ ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರ ಬಳಿಯೇ ಉಳಿಸಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಹಣಕಾಸು, ಗುಪ್ತಚರ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಇಂಧನ ಸೇರಿದಂತೆ ಮತ್ತಿತರ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಲೋಕೋಪಯೋಗಿ ಜೊತೆಗೆ ಸಮಾಜ ಕಲ್ಯಾಣ ಖಾತೆಯನ್ನು ತಮ್ಮ ಬಳಿಯೇ ಉಳಸಿಕೊಂಡಿದ್ದಾರೆ. ಸಚಿವ ಶ್ರೀರಾಮುಲು ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಜೊತೆಗೆ ಹಿಂದುಳಿದ ಕಲ್ಯಾಣ ಇಲಾಖೆಯ ಹೊಣೆಗಾರಿಕೆ ಮುಂದುವರೆಸಲಾಗಿದೆ.

ಉಳಿದಂತೆ ಡಾ.ಅಶ್ವಥ್ ನಾರಾಯಣ ಅವರಿಗೆ ವೈದ್ಯಕೀಯ ಶಿಕ್ಷಣ ದ ಜೊತೆಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಗಿತ್ತು. ಇದೀಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಡಾ.ಕೆ.ಸುಧಾಕರ್‍ಗೆ ನೀಡಿದ್ದರೆ, ಮತ್ತೋರ್ವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬಳಿ ಸಾರಿಗೆ ಇಲಾಖೆಗೆ ಜೊತೆಗೆ ಹೆಚ್ಚುವರಿಯಾಗಿದ್ದ ಸಹಕಾರ ಖಾತೆಯನ್ನು ಎಸ್.ಟಿ.ಸೋಮಶೇಖರ್‍ಗೆ ನೀಡಲಾಗಿದೆ.
ವಸತಿ ಸಚಿವ ವಿ.ಸೋಮಣ್ಣನವರ ಬಳಿ ಇದ್ದ ತೋಟಗಾರಿಕೆ ಮತ್ತು ನಗರಾಭಿವೃದ್ದಿಯನ್ನೂ ಹಿಂಪಡೆಯಲಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಬಳಿ ಇದ್ದ ಅರಣ್ಯ, ಪ್ರಾಥಮಿಕಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಬಳಿ ಇದ್ದ ಕಾರ್ಮಿಕ ಇಲಾಖೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬಳಿಯಿದ್ದ ಖಾತೆಗಳನ್ನು ಹಿಂಪಡೆಯಲಾಗಿದೆ.  ಕಳೆದ ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 10 ಮಂದಿ ನೂತನ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ಕೆಲವು ಪ್ರಮುಖ ಖಾತೆಗಳನ್ನು ನೀಡಬೇಕೆಂದು ತಮಗೆ ನೀಡಬೇಕೆಂದು ಸಚಿವರು ಪಟ್ಟು ಹಿಡಿದಿದ್ದರಿಂದ ಖಾತೆ ಹಂಚಿಕೆ ವಿಳಂಬವಾಗಿತ್ತು.
ಇನ್ನು ಸಂಪುಟದಲ್ಲಿ ಆರು ಸ್ಥಾನಗಳು ಮಾತ್ರ ಖಾಲಿಯಿದ್ದು, ಮುಂದಿನ ಸಂಪುಟ ಪುನಾರಚನೆ ವೇಳೆ ಈ ಖಾತೆಗಳನ್ನು ಹಂಚಿಕೆ ಮಾಡುವ ಸಂಭವವಿದೆ.

ಖಾತೆ ಹಂಚಿಕೆ:
ಶಿವರಾಮ್ ಹೆಬ್ಬಾರ್ -ಕಾರ್ಮಿಕ
ಬಿ.ಸಿ.ಪಾಟೀಲ್-ಅರಣ್ಯ
ರಮೇಶ್ ಜಾರಕಿಹೊಳಿ- ಜಲಸಂಪನ್ಮೂಲ
ಶ್ರೀಮಂತ್ ಪಾಟಿಲ್ -ಜವಳಿ
ಡಾ.ಕೆ.ಸುಧಾಕರ್–ವೈದ್ಯಕೀಯ ಶಿಕ್ಷಣ
ಆನಂದ್ ಸಿಂಗ್- ಆಹಾರ ಮತ್ತು ನಾಗರಿಕ ಪೂರೈಕೆ
ನಾರಾಯಣಗೌಡ-ಪೌರಾಡಳಿತ ಮತ್ತು ತೋಟಗಾರಿಕೆ
ಭೈರತಿ ಬಸವರಾಜ್-ನಗರಾಭಿವೃದ್ದಿ(ಬೆಂಗಳೂರು ನಗರಾಭಿವೃದ್ದಿ ಹೊರತುಪಡಿ)
ಎಸ್.ಟಿ.ಸೋಮಶೇಖರ್-ಸಹಕಾರ
ಕೆ.ಗೋಪಾಲಯ್ಯ-ಸಣ್ಣ ಕೈಗಾರಿಕೆ

Facebook Comments