ಸಚಿವ ಸಂಪುಟ ವಿಸ್ತರಣೆ ಸುಳಿವು ಸಿಗುತ್ತಿದ್ದಂತೆ ನಾಯಕರ ಮೇಲೆ ಹೆಚ್ಚಿದ ಒತ್ತಡ

Social Share

ಬೆಂಗಳೂರು,ಅ.18- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗಬಹುದೆಂಬ ಸುಳಿವು ಸಿಗುತ್ತಿದ್ದಂತೆ ಆಕಾಂಕ್ಷಿಗಳು ಮುಖ್ಯಮಂತ್ರಿಗಳ ಮನೆಗೆ ದೌಡಾಯಿಸುತ್ತಿದ್ದಾರೆ. ಚುನಾವಣಾ ವರ್ಷ ಆಗಿರುವುದರಿಂದ ಸಿಗಲಿರುವ ಆರೇಳು ತಿಂಗಳ ಅವಧಿಯಲ್ಲಾದರೂ ಮಂತ್ರಿ ಸ್ಥಾನ ಪಡೆಯಲು ಸಿಎಂ ಸೇರಿದಂತೆ ಪ್ರಭಾವಿ ನಾಯಕರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಮತ್ತಿತರ ಆಕಾಂಕ್ಷಿಗಳು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ 5 ನಿಮಿಷಕ್ಕೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಜನಸಂಕಲ್ಪ ಯಾತ್ರೆ ಮಧ್ಯೆಯೇ ದೆಹಲಿಗೆ ತೆರಳುವುದಾಗಿ ಸಿಎಂ ಹೇಳಿರುವುದರಿಂದ ಆಕಾಂಕ್ಷಿಗಳ ಗಾಡ್‍ಫಾದರ್‍ಗಳ ಮೊರೆ ಹೋಗಿದ್ದಾರೆ.

ಯಾವುದೇ ದಿನವಾದರೂ ಬೊಮ್ಮಾಯಿ ಅವರಿಗೆ ದೆಹಲಿ ನಾಯಕರು ರಾಷ್ಟ್ರ ರಾಜಧಾನಿಗೆ ಬರುವಂತೆ ಸೂಚನೆ ನೀಡಬಹುದು. ಹೀಗಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸಮಿತಿಯ ಚುನಾವಣೆ ನಡೆಯುತ್ತಿರುವುದರಿಂದ ದೆಹಲಿಗೆ ತೆರಳಿದ್ದಾರೆ. ವರಿಷ್ಠರ ಜೊತೆ ಅವರು ಸಹ ಮಾತುಕತೆ ನಡೆಸುವ ಸಾಧ್ಯತೆ ಇದೆ.

2023ರ ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಕನಿಷ್ಟ ಪಕ್ಷ ಆರು ತಿಂಗಳಾದರೂ ಸಚಿವ ಸ್ಥಾನದ ಅಧಿಕಾರವನ್ನು ಅನುಭವಿಸಬೇಕೆಂಬುದು ಆಕಾಂಕ್ಷಿಗಳ ಒತ್ತಡವಾಗಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಖಾಲಿ ಇರುವ ಸ್ಥಾನಗಳಿಗೆ ದೆಹಲಿ ನಾಯಕರು ಒಪ್ಪಿದರೆ ಸಂಪುಟ ವಿಸ್ತರಣೆಯಾಗುತ್ತದೆ.

ಚುನಾವಣಾ ವರ್ಷ ಆಗಿರುವುದರಿಂದ ಹಳೇ ಮುಖಗಳಿಗೆ ಕೋಕ್ ನೀಡಿ ಹೊಸಬರಿಗೆ ಆದ್ಯತೆ ಕೊಡುವುದಾದರೆ ಪುನಾರಚನೆಯಾಗಲಿದೆ. ದೆಹಲಿಗೆ ಬರುವಂತೆ ವರಿಷ್ಠರೇನಾದರೂ ಬೊಮ್ಮಾಯಿಗೆ ಸೂಚಿಸಿದರೆ ರಾಜಕೀಯ ಲೆಕ್ಕಾಚಾರಗಳು ಬದಲಾಗಿದೆ.

Articles You Might Like

Share This Article