ಸಂಪುಟ ವಿಸ್ತರಣೆ ಕಸರತ್ತು ಆರಂಭ, ಈ ವಾರ ಸಿಎಂ ಬೊಮ್ಮಾಯಿ ದೆಹಲಿ ಭೇಟಿ

Social Share

ಬೆಂಗಳೂರು,ಸೆ.27- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಾರ ದೆಹಲಿಗೆ ಭೇಟಿ ನೀಡಿ ಸಂಪುಟ ವಿಸ್ತರಣೆ ಕುರಿತು ಬಿಜೆಪಿಯ ವರಿಷ್ಠರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಈ ತಿಂಗಳ ಅಂತ್ಯದೊಳಗೆ ನಡೆಯುವ ಸಾಧ್ಯತೆ ಇರುವುದರಿಂದ ವರಿಷ್ಠರ ಅನುಮತಿ ಪಡೆಯಲು ದೆಹಲಿಗೆ ತೆರಳುವ ಸಂಭವವಿದೆ.

ಒಂದು ಮೂಲದ ಪ್ರಕಾರ ಗುರುವಾರ ಇಲ್ಲವೇ ಶುಕ್ರವಾರವೇ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಮುಗಿದ ಅಧಿವೇಶನದ ಸಂದರ್ಭದಲ್ಲಿ ಬೊಮ್ಮಾಯಿ ಅವರು ಶೀಘ್ರದಲ್ಲೇ ದೆಹಲಿಗೆ ತೆರಳಿ ಇಲ್ಲವೇ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ, ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕುರಿತಾಗಿ ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ದರು.

ದೆಹಲಿಗೆ ತೆರಳುವ ಸಮಯ ಈವರೆಗೂ ಅಧಿಕೃತವಾಗಿಲ್ಲ. ಒಂದು ವೇಳೆ ಇಲ್ಲಿಗೆ ಬರುವ ಅಗತ್ಯವಿಲ್ಲ ಎಂದು ಸೂಚಿಸಿದರೆ ಎರಡುಮೂರು ದಿನಗಳಲ್ಲಿ ವಿಸ್ತರಣೆ ದಿನಾಂಕ ನಿಗದಿಯಾಗುವ ಲಕ್ಷಣಗಳು ಗೋಚರಿಸಿವೆ. ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಆಕಾಂಕ್ಷಿಗಳು ಒತ್ತಡ ಹಾಕುತ್ತಲೇ ಇದ್ದಾರೆ. ಚುನಾವಣಾ ವರ್ಷವಾಗಿರುವುದರಿಂದ ಯಾವುದಾದರೊಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಎರಡು ಡಜನ್ ಅಧಿಕ ಶಾಸಕರು ಸಿಎಂ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ.

ಮತ್ತೊಂದೆಡೆ ಬಿಜೆಪಿ ಕೇಂದ್ರ ನಾಯಕರು ಕೂಡ ಸಂಪುಟ ವಿಸ್ತರಣೆಗೆ ಉತ್ಸುಕರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದರು. ರಮೇಶ್ ಜಾರಕಿಹೊಳಿ ಮತ್ತು ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದು, ಸಚಿವ ಉಮೇಶ್ ಕತ್ತಿ ನಿಧನರಾಗಿದ್ದಾರೆ.

ಹೀಗಾಗಿ ಬೊಮ್ಮಾಯಿ ಅವರು ತಮ್ಮ ಹಿಂದಿನ ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳೊಂದಿಗೆ ಹಲವಾರು ಮಹತ್ವದ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅರಣ್ಯ ಖಾತೆ ಜೊತೆಗೆ ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ಸಿಎಂ ಬೊಮ್ಮಾಯಿ ಅವರೇ ಹೊಂದಿದ್ದಾರೆ.

ಬಸವರಾಜ ಬೊಮ್ಮಾಯಿ ಅವರ ಮೇಲಿನ ಹೆಚ್ಚುವರಿ ಕೆಲಸಗಳನ್ನು ಪಕ್ಷದ ಹೈಕಮಾಂಡ್ ಕೂಡ ಗಮನಿಸುತ್ತಿದೆ. ಅವೇಶನ ಮುಗಿಯುವುದನ್ನೇ ಕಾಯುತ್ತಿದ್ದ ಸಿಎಂ ಈ ವಾರ ಅವರು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಬಿಬಿಎಂಪಿ ಚುನಾವಣೆ ಘೋಷಣೆಯಾದರೆ, ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಸಿಎಂ ರಾಜ್ಯ ರಾಜಧಾನಿಯತ್ತಲೂ ಗಮನ ಹರಿಸಬೇಕಾಗಿದೆ. ಆದರೆ ಬಿಬಿಎಂಪಿ ಚುನಾವಣೆಗೆ ದಿನಾಂಕ ಅಂತಿಮಗೊಂಡಿಲ್ಲ. ದೆಹಲಿಯ ಪಕ್ಷದ ನಾಯಕರ ಒಪ್ಪಿಗೆಗಾಗಿ ಸಿಎಂ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Articles You Might Like

Share This Article