ಆಗಸ್ಟ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ..? ವಿಜಯೇಂದ್ರಗೆ ಚಾನ್ಸ್..?

Social Share

ಬೆಂಗಳೂರು,ಜು.26- ಆಗಸ್ಟ್ ಮೊದಲ ವಾರದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆಯಿದೆ.

ಬಿ. ವೈ.ವಿಜಯೇಂದ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಯಡಿಯೂರಪ್ಪ ಘೋಷಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಕಳೆದ ಕೆಲವು ದಿನಗಳಿಂದ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯದಲ್ಲಿ ಅವರನ್ನು ಬಳಸಿಕೊಳ್ಳಲು ಯೋಜಿಸಿದ್ದರಿಂದ ಯಡಿಯೂರಪ್ಪನವರು ರಾಜಕೀಯದಿಂದ ಹಿಂದೆ ಸರಿಯುವ ಘೋಷಣೆಯು ಪಕ್ಷದ ವಲಯಗಳಲ್ಲಿ ಆಘಾತ ಉಂಟುಮಾಡಿದೆ.

ವಿಜಯೇಂದ್ರ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬ ಯಡಿಯೂರಪ್ಪ ಅವರ ಬೇಡಿಕೆಗೆ ಹೈಕಮಾಂಡ್ ಈಗ ಸಮ್ಮತಿಸುವ ಸಾಧ್ಯತೆಯಿದೆ ಮತ್ತು ಆಗಸ್ಟ್ 11ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಾಸ್ತವವಾಗಿ ಈ ವರ್ಷ ಜೂನ್ 3ರಂದು ವಿಧಾನಸಭೆಯಿಂದ ಚುನಾವಣೆ ನಡೆದಾಗ ವಿಜಯೇಂದ್ರ ಎಂಎಲ್‍ಸಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಅವಕಾಶ ನಿರಾಕರಿಸಿದ್ದು, ಯಡಿಯೂರಪ್ಪಗೆ ಆಘಾತ ತಂದಿದೆ. ಆಗ ಪಕ್ಷದ ನಾಲ್ಕು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.

ಇದೀಗ ಶಿಕಾರಿಪುರ ಕ್ಷೇತ್ರವನ್ನು ಪಕ್ಷದ ಸ್ಥಳೀಯ ಕಾರ್ಯಕರ್ತರೊಬ್ಬರಿಗೆ ನೀಡಿ ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರಕ್ಕೆ ವರ್ಗಾಯಿಸಿ ಹಳೇ ಮೈಸೂರು ಭಾಗದಲ್ಲಿ ಪಕ್ಷದ ನೆಲೆಯನ್ನು ಹೆಚ್ಚಿಸುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ.

Articles You Might Like

Share This Article