ಮುಂದಿನವಾರ ಸಂಪುಟ ವಿಸ್ತರಣೆ..? ಹೊಸಬರಿಗೆ ಚಾನ್ಸ್

Social Share

ಬೆಂಗಳೂರು,ಜು.21- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಮತ್ತೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸಚಿವಾಕಾಂಕ್ಷಿಗಳು ಮತ್ತೆ ಕಣ್ಣರಳಿಸಿ ಕೂರುವಂತೆ ಮಾಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಅಧಿಕಾರ ಸ್ವೀಕರಿಸಲಿದ್ದು, ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಮುಖ್ಯಮಂತ್ರಿಗಳು ಸಮಾರಂಭಕ್ಕೆ ಆಗಮಿಸುವರು. ರಾಜ್ಯದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸುವರು.

ಸಮಾರಂಭದ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಭೇಟಿಗೆ ಅವಕಾಶ ದೊರೆತರೆ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಚರ್ಚಿ ಪಟ್ಟಿಯನ್ನು ಅಂತಿಮಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಷಯ ಕಳೆದ ಐದಾರು ತಿಂಗಳಿನಿಂದ ಚರ್ಚೆಗೆ ಬಂದು ಹಿಂದೆ ಸರಿಯುತ್ತಿದೆ. ಬೆಳಗಾವಿ ಅಧಿವೇಶನ ನಂತರ, ಸಂಕ್ರಾಂತಿ ನಂತರ, ಬಜೆಟ್ ಅಧಿವೇಶನ ಕಳೆದ ಮೇಲೆ, ಯುಗಾದಿ ಬಳಿಕ ಹೀಗೆ ಮುಂದೆ ಮುಂದೆ ಹೋಗುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಬಹುದು ಎಂಬ ನಿರೀಕ್ಷೆ ಇದೆ.

ಕಳೆದ ಮೇ 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟ ಪುನಾರಚನೆ ಅಥವಾ ಪುನಾರಚನೆ ಕುರಿತು ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ.

ಈ ಬಾರಿ ಸಂಪುಟ ವಿಸ್ತರಣೆ/ ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ. ಒಂದು ವೇಳೆ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಎರಡು ಮೂರು ದಿನಗಳಲ್ಲಿ ಯಾವುದಾದರೊಂದು ನಿರ್ಧಾರಗಳು ಹೊರ ಬೀಳುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯ ಸಿಎಂ ದೆಹಲಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಸದ್ಯ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರಾಜೂಗೌಡ, ಬಸನಗೌಡ ಪಾಟೀಲ್ ಯತ್ನಾಳ್, ಪೂರ್ಣಿಮಾ ಶ್ರೀನಿವಾಸ್, ಎಂ.ಪಿ.ಕುಮಾರಸ್ವಾಮಿ, ಎನ್.ಮಹೇಶ್, ಪಿ.ರಾಜೀವ್, ಸೋಮಶೇಖರ್ ರೆಡ್ಡಿ, ಹರತಾಳ್ ಹಾಲಪ್ಪ, ಕುಮಾರ್ ಬಂಗಾರಪ್ಪ, ಎಸ್.ವಿ.ರಾಮಚಂದ್ರಪ್ಪ, ಕರುಣಾಕರ ರೆಡ್ಡಿ ಸೇರಿದಂತೆ ಹಲವು ಮಂದಿ ಆಕಾಂಕ್ಷಿಗಳು ಸಂಪುಟ ಸೇರುವ ಪ್ರಯತ್ನದಲ್ಲಿದ್ದಾರೆ.

ಸದ್ಯ ವಿಧಾನಸಭೆ ಚುನಾವಣೆಗೆ ಹತ್ತು ತಿಂಗಳು ಬಾಕಿ ಇದ್ದು, ಈ ನಿಟ್ಟಿನಲ್ಲಿ ಪುನಾರಚನೆ ಕಸರತ್ತಿಗೆ ಕೈ ಹಾಕುವ ಸಾಧ್ಯತೆ ಕಡಿಮೆ. ಬದಲಾಗಿ ಬಾಕಿ ಇರುವ ನಾಲ್ಕು ಸ್ಥಾನಗಳನ್ನು ತುಂಬುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಸಕ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದೆಹಲಿಯಲ್ಲಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅಮಿತ್ ಷಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸದ್ಯ ನಾಲ್ಕು ಸಚಿವ ಸ್ಥಾನಗಳು ಮಾತ್ರ ಖಾಲಿ ಇವೆ. ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡಲಾಗುವುದು ಮತ್ತು ಯುವ ಶಾಸಕರು, ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರುವವರಿಗೆ ಸಚಿವ ಸ್ಥಾನ ನೀಡುವ ಗುಸುಗುಸು ಮಾತುಗಳು ಹರಿದಾಡುತ್ತಿವೆ.

ಈ ಹಿನ್ನೆಲೆಯಲ್ಲಿ ಹೊಸದಾಗಿ ಸಚಿವರಾಗಬೇಕು ಎಂಬ ಹುಮ್ಮಸ್ಸಿನಲ್ಲಿರುವವರು ಮತ್ತು ಸಚಿವ ಸ್ಥಾನ ಕಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಕೆಲವರು ಇದ್ದಾರೆ. ಸದ್ಯ ಸಂಪುಟದಲ್ಲಿ 4 ಸ್ಥಾನಗಳು ಖಾಲಿಯಿದ್ದು, ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಹೆಚ್ಚು ಬಾರಿ ಗೆದ್ದಿರುವ ಶಾಸಕರು ಒಂದು ಕೈ ನೋಡೇ ಬಿಡೋಣ ಎಂದು ಅಖಾಡಕ್ಕಿಳಿದಿದ್ದಾರೆ.

ಇದರ ಜೊತೆಗೆ ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ಕೆಲವು ಶಾಸಕರು ಕೂಡ ತಮ್ಮ ತಮ್ಮ ಗಾಡ್ ಫಾದರ್‍ಗಳ ಮೂಲಕ ಸಂಪುಟಕ್ಕೆ ಪರಿಗಣಿಸುವಂತೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗೆ ಮೂಲ ಬಿಜೆಪಿಯಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ನೂತನ ಶಾಸಕರಲ್ಲಿ ಆತಂಕ ತಂದಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಆದರೆ, ಹೈಕಮಾಂಡ್ ಅನುಮತಿ ಇಲ್ಲದೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂಬ ಸ್ಥಿತಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಯಿ ಅವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

Articles You Might Like

Share This Article