ಬೆಂಗಳೂರು,ಡಿ.14- ಎಲ್ಲವೂ ನಿರೀಕ್ಷೆಯಂತೆ ನಡೆದು ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಕಳೆದ ಒಂದು ವರ್ಷಗಳಿಂದ ಪದೇ ಪದೇ ಮುಂದೂಡಲ್ಪಟ್ಟಿದ್ದ ಹಾಗೂ ಬಹುಚರ್ಚಿತ ಸಚಿವ ಸಂಪುಟ ವಿಸ್ತರಣೆ ಶುಕ್ರವಾರ ನಡೆಯುವ ಸಾಧ್ಯತೆ ಇದೆ.
ನವದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಪಕ್ಷದ ಕಚೇರಿಗಳನ್ನು ಉದ್ಘಾಟಿಸಲು ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಕರ್ನಾಟಕಕ್ಕೆ ಆಗಮಿಸುತ್ತಿರುವುದರಿಂದ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಶುಕ್ರವಾರ ಬೆಳಗ್ಗೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ತಾವರ್‍ಚಂದ್ ಗೆಲ್ಹೋಟ್ ಅವರು ನೂತನ ಸಚಿವರಿಗೆ ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.
ದೆಹಲಿಯಲ್ಲಿ ಖರ್ಗೆ ನೇತೃತ್ವದಲ್ಲಿ ನಡೆದ ಕರ್ನಾಟಕ ನಾಯಕರ ಸಭೆಯ ಸೀಕ್ರೆಟ್ ಬಿಚ್ಚಿಟ್ಟ ಕಾಂಗ್ರೆಸ್
ಶನಿವಾರ ಸಾಮಾನ್ಯವಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದಂತಹ ಕಾರ್ಯಕ್ರಮಗಳು ನಡೆಯುವುದು ತೀರ ಕಡಿಮೆ. ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.
ಹೀಗಾಗಿ ವರಿಷ್ಠರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದರೆ ಶುಕ್ರವಾರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ದಟ್ಟವಾಗಿ ಕೇಳಿಬರುತ್ತಿದೆ. ಈಗಾಗಲೇ ರಾಜ್ಯಪಾಲರಿಗೆ ಮೌಖಿಕ ಮಾಹಿತಿ ನೀಡಲಾಗಿದ್ದು,
ಶುಕ್ರವಾರದಂದು ಸಮಯ ನಿಗದಿ ಮಾಡಿಕೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ವಿಸ್ತರಣೆ ಮಾತ್ರ?:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟಕ್ಕೆ ಹೊಸಮುಖಗಳನ್ನು ತೆಗೆದುಕೊಳ್ಳಲು ಸಂಪುಟ ಪುನಾರಚನೆ ಮಾಡಬೇಕೆಂಬ ಇಚ್ಛೆಯಿದೆ. ಪ್ರದೇಶವಾರು, ಜಾತಿ, ಸಂಘ ಪರಿವಾರದ ಹಿನ್ನಲೆ, ಅನುಭವ, ಕ್ಷೇತ್ರದಲ್ಲಿ ಮತದಾರರ ಜೊತೆ ಹೊಂದಿರುವ ಸಂಬಂಧ ಇವೆಲ್ಲವನ್ನು ಮಾನದಂಡವಾಗಿಟ್ಟುಕೊಂಡು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಒಲವನ್ನು ಹೊಂದಿದ್ದಾರೆ.
ಚುನಾವಣಾ ವರ್ಷವಾಗಿರುವುದರಿಂದ ಹೊಸ ಮುಖಗಳಿಗೆ ಆದ್ಯತೆ ಹಾಗೂ ಪದೇ ಪದೇ ಅಧಿಕಾರ ರುಚಿ ಕಂಡವರನ್ನು ಪಕ್ಷ ಸಂಘಟನೆಗೆ ನಿಯೋಜಿಸಿ ಹಾಲಿ ಸಂಪುಟದಲ್ಲಿರುವ ಕನಿಷ್ಟ 5ರಿಂದ 6 ಸಚಿವರನ್ನು ಕೈಬಿಟ್ಟು ಖಾಲಿ ಇರುವ ಆರು ಸ್ಥಾನಗಳ ಜೊತೆಗೆ ಒಟ್ಟು ಸಂಪುಟಕ್ಕೆ 12 ಮಂದಿಯನ್ನು ತೆಗೆದುಕೊಳ್ಳಬೇಕೆಂಬ ತರ್ಕ ನಡೆದಿದೆ.
ಆದರೆ ಚುನಾವಣೆ ಸಂದರ್ಭದಲ್ಲಿ ಸಂಪುಟದಿಂದ ಯಾರನ್ನೇ ಕೈಬಿಟ್ಟರೂ ಅದು ಚುನಾವಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಸಂಘ ಪರಿವಾರದವರು ಸಲಹೆ ಕೊಟ್ಟಿದ್ದಾರೆ.
ಪ್ರತಿ ರಾಜ್ಯದಲ್ಲೂ ಗುಜರಾತ್ ಮಾದರಿ ಚುನಾವಣೆ ನಡೆಯುವುದಿಲ್ಲ. ಬಂಡಾಯ ಹತ್ತಿಕ್ಕದ ಪರಿಣಾಮ ಹಿಮಾಚಲಪ್ರದೇಶದಲ್ಲಿ ಸೋಲುಂಟಾಯಿತು. ಹೀಗಾಗಿ ಪುನಾರಚನೆಗೆ ಕೈ ಹಾಕದೆ ಸದ್ಯಕ್ಕೆ ಖಾಲಿ ಸ್ಥಾನ ತುಂಬಲಷ್ಟೇ ಗಮನಕೊಡಬೇಕೆಂದು ಆರ್‍ಎಸ್‍ಎಸ್ ಸಿಎಂಗೆ ಕಿವಿಮಾತು ಹೇಳಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ..?
ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ , ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಸದ್ಯ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇದ್ದು ಸಮತೋಲನದ ಸಂಪುಟ ವಿಸ್ತರಣೆಗೆ ಸಿಎಂ ಒಲವು ತೋರಿದ್ದಾರೆ.
ಆದರೆ ಸಂಪುಟಕ್ಕೆ ಯಾರು ಸೇರ್ಪಡೆಯಾಗಲಿದ್ದಾರೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಅಷ್ಟರಮಟ್ಟಿಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಪಿ.ರಾಜೀವ್, ಸಿ.ಪಿ.ಯೋಗೇಶ್ವರ್, ಎಂ.ಪಿ.ರೇಣುಕಾಚಾರ್ಯ ಸೇರ್ಪಡೆಯಾಗುವ ಸಾಧ್ಯತೆ ಇದೆ.
cabinet expansion, cm bommai, Friday,