ಸಂಪುಟ ವಿಸ್ತರಣೆಗೆ ಸಿಎಂ ಬೊಮ್ಮಾಯಿ ಸಿದ್ಧತೆ

Social Share

ಬೆಂಗಳೂರು,ಆ.9-ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಪುನಾರಚನೆಗೆ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠ ರೊಂದಿಗೆ ಸಮಾಲೋಚನೆ ನಡೆಸಿದ್ದು, ವಿಧಾನಸಭೆ ಚುನಾವಣೆಗೆ ಕೇವಲ ಎಂಟು ತಿಂಗಳು ಬಾಕಿ ಇರುವ ಕಾರಣ ಖಾಲಿ ಇರುವ ಐದು ಸ್ಥಾನಗಳಲ್ಲಿ ಕನಿಷ್ಠ ಮೂರರಿಂದ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ನಿರೀಕ್ಷೆಯಿದೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಾಲೋಚನೆಯ ಸಂದರ್ಭದಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುವುದನ್ನು ತಳ್ಳಿಹಾಕಿದ್ದು, ಮುಂದಿನ ಬಿಜೆಪಿ ಸರ್ಕಾರ ಸೇರ್ಪಡೆಗೊಳ್ಳಲು ಅವರು ಕಾಯಬೇಕಾಗಿದೆ ಎಂದು ಹೇಳಲಾಗಿದೆ.

ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾಕಿಹೊಳಿ ಅವರು ತಮ್ಮ ವಿರುದ್ಧ ಕ್ಲೀನ್ ಚಿಟ್ ಪಡೆದ ನಂತರ ಮತ್ತೆ ಸೇರ್ಪಡೆಗೊಳ್ಳಲು ಶ್ರಮಿಸುತ್ತಿದ್ದಾರೆ. ಆದರೆ ಅವರನ್ನು ವಾಪಸ್ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಅವಧಿ ಮುಗಿಯುತ್ತಿದ್ದಂತೆ ಅವರ ಬದಲಾವಣೆ ಬಹುತೇಕ ಖಚಿತವಾಗಿದೆ. ಇಂಧನ ಸಚಿವ ಸುನೀಲ್‍ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೆಸರು ಕೇಳಿಬರುತ್ತಿದೆ.

ಸುನಿಲ್ ಕುಮಾರ್ ಯುವ ನಾಯಕರಾಗಿದ್ದು, ಹಿಂದುಳಿದ ಬಿಲ್ಲವ ಸಮುದಾಯದವರಾಗಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಒಬ್ಬರು ಅಥವಾ ಇಬ್ಬರು ಸಚಿವರಿಗೆ ಪಕ್ಷದ ಕೆಲಸಗಳನ್ನು ನಿಯೋಜಿಸುವ ಸಾಧ್ಯತೆಯಿದ್ದು, ಪ್ರಾತಿನಿಧ್ಯವಿಲ್ಲದ ಸಮುದಾಯಗಳು ಮತ್ತು ಜಿಲ್ಲೆಗಳಿಂದ ಕೆಲವು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಆ ಹುದ್ದೆ ಬಹುತೇಕ ಸಿ.ಟಿ. ರವಿ ಪಾಲಾಗಲಿದೆ ಎಂದು ತಿಳಿದು ಬಂದಿದೆ.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ. ಆದರೆ ಮೋದಿಯವರ ಭೇಟಿಯು ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ್ದಾಗಿದ್ದು ರಾಜ್ಯ ನಾಯಕತ್ವದ ಬದಲಾವಣೆಗೆ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

Articles You Might Like

Share This Article