ಸಂಪುಟ ವಿಸ್ತರಣೆ ವಿಳಂಬ: ಶಾಸಕರಲ್ಲಿ ಅಸಮಧಾನ

Social Share

ಬೆಂಗಳೂರು,ಸೆ.18- ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದರೂ ಸಚಿವ ಸಂಪುಟ ವಿಸ್ತರಣೆ ಇನ್ನೂ ನಡೆಯದ ಬಗ್ಗೆ ಆಡಳಿತ ಪಕ್ಷ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಹೊಗೆಯಾಡಿದೆ. ಸಚಿವ ಸ್ಥಾನದ ಆಕಾಂಕ್ಷಿತರಲ್ಲಿ ಕೆಲವರು ವಿಧಾನಸಭೆ ಅಧಿವೇಶನಕ್ಕೆ ಗೈರಾಗಿ ಪ್ರತಿಭಟನೆಯ ಸಂದೇಶ ರವಾನಿಸಿದರೆ, ಇನ್ನೂ ಕೆಲವು ಶಾಸಕರು ಅಧಿವೇಶನಕ್ಕೆ ಆಗಮಿಸಿದರೂ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ನಿರಾಸಕ್ತಿ ತೋರುತ್ತಿದ್ದಾರೆ.

ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಮಂತ್ರಿಮಂಡಲದಲ್ಲಿ 6 ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಬೊಮ್ಮಾಯಿ ಅಧಿಕಾರಕ್ಕೆ ಬಂದು ಒಂದು ವರ್ಷದ ಆಡಳಿತ ಪೂರೈಸಿದರೂ ಮಂತ್ರಿಮಂಡಲ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆ ಕುರಿತು ಮುಖ್ಯಮಂತ್ರಿಗಳಾಗಲಿ, ಪಕ್ಷದ ಹೈಕಮಾಂಡ್ ಆಗಲಿ ಹೆಚ್ಚಿನ ಗಮನಹರಿಸುತ್ತಿಲ್ಲ.

ಎಂಬ ಬೇಸರ ಸಚಿವಸ್ಥಾನದ ಆಕಾಂಕ್ಷಿಗಳಲ್ಲಿ ಮನೆ ಮಾಡಿದೆ. ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿರುವ ಬಿಜೆಪಿ ಹಿರಿಯ ನಾಯಕರಾದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಸಂಪುಟ ವಿಸ್ತರಣೆ ನಡೆಸದಿರುವ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ರಾಹುಲ್ ಗಾಂಧಿಗೆ ಎಐಸಿಸಿ ಪಟ್ಟ ಕಟ್ಟಲುರಾಜಸ್ಥಾನ ಕಾಂಗ್ರೆಸ್ ನಿರ್ಣಯ

ಇದೇ ಬೇಸರದಿಂದ ವಿಧಾನಸಭೆ ಅಧಿವೇಶನಕ್ಕೂ ಸಹ ಆಗಮಿಸದೆ ಶಿವಮೊಗ್ಗದಲ್ಲೇ ಉಳಿದುಕೊಂಡಿದ್ದಾರೆ. ಅಧಿವೇಶನಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ಸಂದೇಶ ರವಾನಿಸಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಮೀಷನ್ ಆರೋಪದ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿ ಬಿ ರಿಪೋರ್ಟ್ ಸಲ್ಲಿಸಿದ ನಂತರವೂ ಮಂತ್ರಿಮಂಡಲಕ್ಕೆ ತಗೆದುಕೊಳ್ಳದಿರುವ ಬಗ್ಗೆ ಪಕ್ಷದ ಮುಖಂಡರೆದುರು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.

ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾಲೆಳೆಯುತ್ತಿದ್ದ ಈಶ್ವರಪ್ಪನವರ ಗೈರು ಹಾಜರಿ ಸದನದಲ್ಲಿ ಎದ್ದು ಕಾಣುತ್ತಿದೆ. ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹ ಸಚಿವ ಸಂಪುಟ ವಿಸ್ತರಣೆ ಮಾಡದಿರುವ ಕ್ರಮದ ಬಗ್ಗೆ ಬಹಳಷ್ಟು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಎಸ್‍ಐಟಿ ತನಿಖೆ ನಡೆಸಿ ಕ್ಲೀನ್‍ಚಿಟ್ ನೀಡಿದ ಬಳಿಕವೂ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳದಿರುವ ಬಗ್ಗೆ ಅವರು ಬೇಸರಗೊಂಡಿದ್ದಾರೆ. ಇದರಿಂದಲೇ ವಿಧಾನಸಭೆ ಅಧಿವೇಶನಕ್ಕೂ ಗೈರಾಗಿ ಅತೃಪ್ತಿ ಹೊರಹಾಕಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನದ ಬಹುತೇಕ ಆಕಾಂಕ್ಷಿಗಳು ಸದನಕ್ಕೆ ಗೈರಾದರೆ ಇನ್ನೂ ಕೆಲವರು ಅಧಿವೇಶನಕ್ಕೆ ಬಂದರೂ ಕಾರ್ಯಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲವೆಂದು ತಿಳಿದುಬಂದಿದೆ.

ಸಚಿವ ಸಂಪುಟ ವಿಸ್ತರಣೆ ಆಗ ನಡೆಯುತ್ತದೆ, ಈಗ ನಡೆಯುತ್ತದೆ ಎಂದು ಮುಖ್ಯಮಂತ್ರಿ ಸೇರಿದಂತೆ ಪಕ್ಷದ ವರಿಷ್ಠರು ನೀಡಿದ ಆಶ್ವಾಸನೆಗಳು ಹಲವಾರು ತಿಂಗಳು ಕಳೆದರೂ ಈಡೇರಿಲ್ಲ. ಇದರಿಂದ ಮಂತ್ರಿಯಾಗುವ ಕನಸು ಕಂಡಿರುವವರು ಅತಿ ಹೆಚ್ಚು ಭ್ರಮನಿರಸನಗೊಂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ನಡೆಯುವ ಬಗ್ಗೆ ಅನುಮಾನ ಹೊಂದಿರುವ ಬಿಜೆಪಿ ಶಾಸಕರು ಕೆಲವೇ ತಿಂಗಳುಗಳು ಬಾಕಿಯಿರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಕಡೆ ಹೆಚ್ಚಿನ ಗಮನಹರಿಸುತ್ತಿದ್ದಾರೆ.

ಸಚಿವ ಹುದ್ದೆಗಾಗಿ ಬಂಡಾಯದಂತಹ ಚಟುವಟಿಕೆಗಳನ್ನು ನಡೆಸಿದರೆ ಪ್ರಬಲವಾಗಿರುವ ಪಕ್ಷದ ಹೈಕಮಾಂಡ್ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನೀಡದೇ ಕೈ ಕೊಟ್ಟರೆ ಎಂಬ ಭೀತಿಯೂ ಸಚಿವ ಆಕಾಂಕ್ಷಿಗಳನ್ನು ಕಾಡುತ್ತಿದೆ. ಹಾಗಾಗಿ ಯಾವುದೇ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗದೇ, ಬಹಿರಂಗವಾಗಿ ಅಸಮಾಧಾನವನ್ನೂ ವ್ಯಕ್ತಪಡಿಸದೇ ಬಂಡಾಯ ಹತ್ತಿಕ್ಕಿಕೊಂಡು ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ : ಅಶೋಕ್ ಮಾಡಿರುವ ಒತ್ತುವರಿ ಪಟ್ಟಿಯಲ್ಲಿ ಪದ್ಮನಾಭನಗರವೂ ಇದೆಯೇ..?

ಇದನ್ನೇ ಬಂಡವಾಳ ಮಾಡಿಕೊಂಡಿರುವ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಹೆಚ್ಚಿನ ಒಲವು ತೋರುತ್ತಿಲ್ಲ ಎನ್ನಲಾಗಿದೆ.

Articles You Might Like

Share This Article