ಬಿಜೆಪಿಯಲ್ಲಿ ಬದಲಾವಣೆ ಗಾಳಿ, ಅಮಿತ್ ಶಾ ಆಗಮದತ್ತ ಎಲ್ಲರ ಚಿತ್ತ

ಬೆಂಗಳೂರು,ಮೇ2- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಮುಂದಿನ ವರ್ಷ ಏಪ್ರಿಲ್-ಮೇಯಲ್ಲಿ ವಿಧಾನಸಭೆ ಚುನಾವಣೆಯಿದ್ದು ಈ ಹೊತ್ತಿನಲ್ಲಿ ರಾಜ್ಯ ಸಚಿವ ಸಂಪುಟ ಹಾಗೂ ಬಿಜೆಪಿಯಲ್ಲಿ ಹಲವು ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಯಿದೆ.

ಅಮಿತ್ ಶಾ ಭೇಟಿ ಸಹಜ ಎಂದು ಹೇಳಲಾಗುತ್ತಿದೆ. ಖೇಲೋ ಇಂಡಿಯಾದ ಸಮಾರೋಪ ಸಮಾರಂಭದಲ್ಲಿ ನಾಳೆ ಭಾಗವಹಿಸಲಿದ್ದು, ಬಸವ ಜಯಂತಿ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಲಿದ್ದಾರೆ. ಆದರೆ ಅವರು ಬರುವುದು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಮುಖ ಬದಲಾವಣೆ ಮಾಡಲು ಎಂದು ಹೇಳಲಾಗುತ್ತಿದೆ.

ದೀರ್ಘ ಸಮಯದಿಂದ ವಿಳಂಬವಾಗಿಕೊಂಡು ಬಂದಿರುವ ಸಚಿವ ಸಂಪುಟ ಪುನಾರಚನೆ ಮತ್ತು ಪಕ್ಷದ ಸ್ಥಿತಿಗತಿ ಇಲ್ಲಿ ಮುಖ್ಯವಾಗಿದೆ. ಬೊಮ್ಮಾಯಿಯವರು ತಮ್ಮ ಅಧಿಕೃತ ನಿವಾಸದಲ್ಲಿ ಅಮಿತ್ ಶಾ ಅವರಿಗೆ ನಾಳೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಿದ್ದಾರೆ.

ಚುನಾವಣೆಗೆ ಇನ್ನು ಒಂದು ವರ್ಷವೂ ಇಲ್ಲದಿರುವುದರಿಂದ ಈ ಬಾರಿ ಶಾ ಅವರ ಭೇಟಿ ನಿರ್ಣಾಯಕವಾಗಲಿದೆ. ಅನೇಕ ಹೊಸ ಮುಖಗಳಿಗೆ ನಾಯಕತ್ವ ನೀಡಬಹುದು. ಸರ್ಕಾರವು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ನಾಯಕರೊಬ್ಬರು ಹೇಳುತ್ತಾರೆ. ಎಂಟರಿಂದ ಹತ್ತು ಮಂದಿ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ, ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ದೆಹಲಿ ಮತ್ತು ಗುಜರಾತ್‍ನಲ್ಲಿ ಕಾಪೆರ್ರೇಷನ್ ಚುನಾವಣೆಗಳನ್ನು ಗೆಲ್ಲುವ ಮೂಲಕ ನಾವು ಆ ಪ್ರಯೋಗದಲ್ಲಿ ಯಶಸ್ವಿಯಾಗಿದ್ದೇವೆ. ಹಾಲಿ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರನ್ನು ದೂರವಿಟ್ಟು ಹೊಸ ಮುಖಗಳನ್ನು ಪರಿಚಯಿಸಿದ್ದೇವೆ ಎಂದು ಬಿ.ಎಲ್.ಸಂತೋಷ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದು, ಬಿಜೆಪಿ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಇದೇ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೂಡ ಮಾತನಾಡಿದ್ದಾರೆ. ನಾವು ಎಲ್ಲಿ ದುರ್ಬಲರಾಗಿದ್ದೇವೋ ಅಲ್ಲಿ ಬದಲಾವಣೆ ಅನಿವಾರ್ಯ, ಪಕ್ಷವು ದುರ್ಬಲ ನಾಯಕರನ್ನು ಉತ್ತೇಜಿಸುವುದಿಲ್ಲ. ನಮ್ಮದೇ ಆದ ಕರ್ನಾಟಕ ಮಾದರಿ ಇದೆ. ಗುಜರಾತ್ ಅಥವಾ ಪಂಜಾಬ್ ಮಾದರಿ ಇರುವುದಿಲ್ಲ ಹೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೂಲಗಳ ಪ್ರಕಾರ, ಬಿಜೆಪಿಯ ಆಂತರಿಕ ಸಮೀಕ್ಷೆಯು ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷ ಎರಡರಲ್ಲೂ ಬದಲಾವಣೆಯಾಗದ ಹೊರತು ಪಕ್ಷಕ್ಕೆ ಅಧಿಕಾರವನ್ನು ಉಳಿಸಿಕೊಳ್ಳುವುದು ಕಠಿಣ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ.ವಿಜಯೇಂದ್ರ ಅವರು ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರೆಸಿದ್ದಾರೆ. ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಕೆಲವು ದಿನಗಳ ಹಿಂದೆ ದೆಹಲಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.