ಗದಗ,ಜ.4- ಸಂಕ್ರಾಂತಿ ಬಳಿಕ ಸಚಿವ ಸಂಪುಟ ಬದಲಾಗಲಿದೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನಾರಚನೆ ಬಗ್ಗೆ ನನಗೆ ಮಾಹಿತಿ ಇಲ್ಲ.
ಏನೇ ಆದರೂ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಹೇಳಿದರು. ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸದ್ಯಕ್ಕೆ ಲಾಕ್‍ಡೌನ್ ವಿಚಾರ ಇಲ್ಲ. ಆದರೆ ಮೂರನೇ ಅಲೆಯ ಆತಂಕದಲ್ಲಿದ್ದೇವೆ.
ಕೊರೊನಾ ಪ್ರಕರಣಗಳನ್ನು ಗಮನಿಸಿದರೆ 3ನೇ ಅಲೆ ಎದುರಾಗುವ ಭೀತಿ ಇದೆ. ಆರಂಭದಲ್ಲಿ ನಿಯಂತ್ರಣಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಜನರ ಆರೋಗ್ಯದ ರಕ್ಷಣೆ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.
ಕಠಿಣ ನಿಯಮಗಳನ್ನು ಸರ್ಕಾರ ಜಾರಿ ಮಾಡಿದರಷ್ಟೇ ಸಾಲದು ಜನ ಸ್ವಯಂ ನಿಯಂತ್ರಣದಿಂದ ಸೋಂಕು ನಿಯಂತ್ರಿಸಬಹುದು ಎಂದರು.
ಓಮಿಕ್ರಾನ್ ಮೊದಲ ಮತ್ತು 2ನೇ ಅಲೆಗಿಂತ ತೀವ್ರವಾಗಿ ಹರಡುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಶಾಸಕರು, ಸಚಿವರಿಗೆ ಸೋಂಕು ತಗುಲಿದೆ.
ಜನ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಸರ್ಕಾರ ಕಠಿಣ ನಿಯಮಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಒಂದೆರಡು ದಿನಗಳಲ್ಲಿ ಅಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
