ಆನಂದ್ ಸಿಂಗ್-ಮಾಧುಸ್ವಾಮಿ-ಸುಧಾಕರ್ ನಡುವೆ ಖಾತೆ ಕಿತ್ತಾಟ

ಬೆಂಗಳೂರು,ಜ.25-ಮುನಿಸಿಕೊಂಡಿದ್ದ ಕೆಲವು ಸಚಿವರ ಅಸಮಾಧಾನವನ್ನು ತಣಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಖಾತೆ ಬದಲಾವಣೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.  ಸದ್ಯ ಮೂವರು ಸಚಿವರ ಖಾತೆಗಳು ಇಂದು ಬದಲಾಗಿದ್ದು,  ಒಂದೇ ವಾರದ ಅವಧಿಯಲ್ಲಿ ಸಚಿವರ ಖಾತೆ ಬದಲಾಗಿರುವುದು ಪ್ರಾಯಶಃ ಇದೇ ಮೊದಲು.
ವೈದ್ಯಕೀಯ ಶಿಕ್ಷಣವನ್ನು ಹಿಂಪಡೆದಿದ್ದಕ್ಕೆ ಮುನಿಸಿಕೊಂಡಿದ್ದ ಸಚಿವ ಡಾ.ಕೆ.ಸುಧಾಕರ್ ಅವರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಯಡಿಯೂರಪ್ಪ, ಸುಧಾಕರ್‍ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಜೊತೆಗೆ ವೈದ್ಯಕೀಯ ಖಾತೆಯನ್ನು ಮತ್ತೆ ನೀಡಲಾಗಿದೆ. ಜೊತೆಗೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿಗೆ ಈಗ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ.

ಈ ದಿಢೀರ್ ಬೆಳವಣಿಗೆಯಿಂದಾಗಿ ಮಾಧುಸ್ವಾಮಿ ಮುನಿಸಿಕೊಂಡಿದ್ದು ನಾಳೆ ನನ್ನ ಅಭಿಪ್ರಾಯವನ್ನು ಬಹಿರಂಗಪಡಿಸುವುದಾಗಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಪ್ರವಾಸೋದ್ಯಮ ಸಚಿವರಾಗಿದ್ದ ಆನಂದ್ ಸಿಂಗ್ ಅವರ ಖಾತೆಯನ್ನು ಬದಲಾವಣೆ ಮಾಡಿರುವುದಕ್ಕೆ ಬೇಸರಗೊಂಡಿದ್ದು, ಸಚಿವ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ತಮ್ಮ ಆಪ್ತರ ಬಳಿ ರಾಜೀನಾಮೆ ನೀಡುವ ಇಂಗಿತವನ್ನು ವಕ್ತಪಡಿಸಿದ್ದಾರೆ.

ನಾಳೆ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ಮುಗಿಸಿದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ನೂತನ ಸಚಿವರನ್ನು ಖಾತೆ ಹಂಚಿಕೆ ಮಾಡುವ ವೇಳೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು ಜೆ.ಸಿ.ಮಾಧುಸ್ವಾಮಿ ಅವರಿಗೆ ನೀಡಲಾಗಿತ್ತು.
ಈ ಬೆಳವಣಿಗೆಯಿಂದ ಸುಧಾಕರ್ ಮುನಿಸಿಕೊಂಡು ಸಚಿವ ಸಂಪುಟಕ್ಕೆ ಗೈರು ಹಾಜರಾಗಿದ್ದಲ್ಲದೆ ಕೆಲವು ಸಚಿವರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರು.

ಪ್ರಸ್ತುತ ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಮಾಡಬೇಕಾದ ಅಗತ್ಯವಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಯನ್ನು ಒಬ್ಬರಿಗೇ ನೀಡಬೇಕೆಂದು ಮನವಿ ಮಾಡಿದ್ದರು.  ಇದಕ್ಕೆ ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರು ವೈದ್ಯಕೀಯ ಖಾತೆಯನ್ನು ಹಿಂಪಡೆದು ಒಂದೇ ಖಾತೆಗೆ ಸೀಮಿತಗೊಳಿಸಿದ್ದರು. ಇದು ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ವೇಳೆ ಸಣ್ಣ ನೀರಾವರಿ ಖಾತೆಯನ್ನು ಹಿಂಪಡೆದು ವೈದ್ಯಕೀಯ ಖಾತೆ ನೀಡಿದ್ದಕ್ಕೆ ಮಾಧುಸ್ವಾಮಿ ಕೂಡ ಕೋಪಗೊಂಡಿದ್ದರು.  ಇದೀಗ ಅವರಿಗೆ ಆನಂದ್ ಸಿಂಗ್ ಬಳಿ ಇದ್ದ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದ್ದು, ವೈದ್ಯಕೀಯ ಖಾತೆಯನ್ನು ಸುಧಾಕರ್‍ಗೆ ನೀಡಲಾಗಿದೆ.  ಆನಂದ್ ಸಿಂಗ್ ಅವರ ಬಳಿ ಇದ್ದ ಪ್ರವಾಸೋದ್ಯಮವನ್ನು ಹಿಂಪಡೆಯಲಾಗಿದ್ದು, ಅವರಿಗೆ ಮೂಲಭೂತ ಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ನೀಡಲು ತೀರ್ಮಾನಿಸಲಾಗಿದೆ.

ಈ ಮೊದಲು ಅರಣ್ಯ ಖಾತೆಯನ್ನು ಬದಲಾವಣೆ ಮಾಡಿದ್ದಕ್ಕೆ ಮುನಿಸಿಕೊಂಡಿದ್ದ ಆನಂದ್ ಸಿಂಗ್ ಈಗ ಪ್ರವಾಸೋದ್ಯಮ ಖಾತೆಯನ್ನು ಹಿಂಪಡೆದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.  ತಮಗೆ ಸಣ್ಣ ನೀರಾವರಿ ಖಾತೆಯನ್ನೇ ನೀಡಬೇಕೆಂದು ಮಾಧುಸ್ವಾಮಿ ಕೂಡ ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಸಂಪುಟ ವಿಸ್ತರಣೆ ನಂತರ ಎದುರಾಗಿದ್ದ ಬಿಕ್ಕಟ್ಟಿನಿಂದ ಪಾರಾಗಿದ್ದ ಬಿಎಸ್‍ವೈ ಅವರಿಗೆ ಈಗ ಸಚಿವರ ಅಸಮಾಧಾನ ಮತ್ತಷ್ಟು ಇಕ್ಕಟ್ಟು ಸೃಷ್ಟಿಸಿರುವುದು ಸುಳ್ಳಲ್ಲ.