ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳ ಲಾಬಿ ಜೋರು

ಬೆಂಗಳೂರು,ಏ.27- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ಮೇ ತಿಂಗಳ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಲಾಬಿ ಕೂಡ ಜೋರಾಗುತ್ತಿದೆ. ಚುನಾವಣೆಗೆ ಒಂದೇ ವರ್ಷ ಬಾಕಿ ಇರುವುದರಿಂದ ಶತಾಯಗತಾಯ ಈ ಬಾರಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಆಕಾಂಕ್ಷಿಗಳು ಗಾಡ್‍ಫಾದರ್‍ಗಳ ಮೊರೆ ಹೋಗಿದ್ದಾರೆ.

ಕೆಲವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಎಡತಾಕಿದರೆ, ಇನ್ನು ಕೆಲವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಮತ್ತಿತರ ನಾಯಕರ ಮನೆ ಬಾಗಿಲು ಬಡೆಯುತ್ತಿದ್ದಾರೆ.

ಸದ್ಯ ಸಂಪುಟದಲ್ಲಿ 5 ಸ್ಥಾನಗಳು ಖಾಲಿಯಿದ್ದು, ಈ ಬಾರಿ ಕೆಲವು ಸಚಿವರನ್ನು ಕೈಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. 6ರಿಂದ 8 ಸಚಿವರನ್ನು ಕೈಬಿಟ್ಟರೆ 11ರಿಂದ 13 ಸ್ಥಾನಗಳು ಖಾಲಿಯಾಗಲಿದ್ದು, ತೆರವಾಗಲಿರುವ ಈ ಸ್ಥಾನಗಳಿಗೆ ಸುಮಾರು 3 ಡಜನ್ ಶಾಸಕರು ಕಣ್ಣಿಟ್ಟಿದ್ದಾರೆ.

ಈ ಬಾರಿ ಸಂಪುಟದಲ್ಲಿ ತಮಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಅಚಲವಾದ ನಂಬಿಕೆ ಇಟ್ಟುಕೊಂಡಿರುವವರು ಯಾರೊಬ್ಬರ ಮೊರೆ ಹೋಗಿಲ್ಲ. ಸಿಗಲೂಬಹುದು, ಸಿಗದೇ ಇರಬಹುದು ಎಂಬ ಹೊಯ್ದಾಟದಲ್ಲಿರುವವರು ಮಾತ್ರ ಬೆಂಗಳೂರು ಮತ್ತು ದೆಹಲಿ ನಾಯಕರ ಎದುರು ನೋಡುತ್ತಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ.ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಆಕಾಂಕ್ಷಿಗಳಾಗಿರುವ ಸತೀಶ್ ರೆಡ್ಡಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ರಾಜುಗೌಡ ನಾಯಕ್, ಮಾಡಾಳು ವಿರೂಪಾಕ್ಷಪ್ಪ, ಹರತಾಳ್ ಹಾಲಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅರವಿಂದಬ ಬೆಲ್ಲದ್, ಎಸ್.ಎ.ರಾಮದಾಸ್, ಎನ್.ಮಹೇಶ್, ಕರುಣಾಕರ ರೆಡ್ಡಿ ಸೇರಿದಂತೆ ಸರಿಸುಮಾರು ಮೂರು ಡಜನ್ ಶಾಸಕರು ಕುರ್ಚಿಗೆ ಟವಲ್ ಹಾಕಲು ಸಿದ್ದತೆ ನಡೆಸಿದ್ದಾರೆ.

ಇದೇ 30ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಪಡೆಯಲು ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಸಿಪಿ ಯೋಗೇಶ್ವರ್, ಆನಂದ್ ಮಾಮನಿ ಸೇರಿದಂತೆ ಹಲವರು ರೇಸ್ ಕೋರ್ಸ್ ರಸ್ತೆಯ ಸಿಎಂ ನಿವಾಸಕ್ಕೆ ಭೇಟಿ ನೀಡಿ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ.

ಏ.29ರ ಸಂಜೆ ಸಿಎಂ ದೆಹಲಿಗೆ ತೆರಳುತ್ತಿದ್ದು, ಏಪ್ರಿಲ್ 30ರಂದು ಹೈಕೋರ್ಟ್ ನ್ಯಾಯೀಶರ ಹಾಗೂ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೈಕಮಾಂಡ್ ನಾಯಕರ ಭೇಟಿಗೆ ಸಿಎಂ ಅನುಮತಿ ಕೋರಿದ್ದು, ಇನ್ನು ಭೇಟಿಗೆ ಸಮಯ ನಿಗದಿಯಾಗಿಲ್ಲ. ಹಾಗಾಗಿ ದೆಹಲಿಗೆ ಟಿಕೆಟ್ ಕಾಯ್ದಿರಿಸಿರುವ ಸಿಎಂ, ವಾಪಸ್ ಬರುವ ಆಯ್ಕೆಯನ್ನು ಕಾಯ್ದಿರಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ರಾಜ್ಯದಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮಂತ್ರಿಮಂಡಲ ವಿಸ್ತರಣೆ ಮಾಡುವುದು ಉತ್ತಮವೋ? ಅಥವಾ ಕೆಲವು ಸಚಿವರನ್ನು ಕೈಬಿಟ್ಟು ಪುನರ್ ರಚನೆ ಮಾಡುವುದು ಹೆಚ್ಚು ಸೂಕ್ತವೇ? ಎನ್ನುವುದರ ಬಗ್ಗೆ ಯೋಚಿಸುತ್ತಿರುವ ಬಿಜೆಪಿ ಹೈಕಮಾಂಡ್ ರಾಜಕೀಯ ಲಾಭ – ನಷ್ಟದ ಲೆಕ್ಕಾಚಾರ ಹಾಕತೊಡಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂತ್ರಿಮಂಡಲದಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕ್ಯಾಬಿನೆಟ್ ವಿಸ್ತರಣೆಗೆ ಹೈಕಮಾಂಡ್ ಬಳಿ ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಆದರೆ, ಇದಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದೆ ಹೈಕಮಾಂಡ್ ತನ್ನ ನಿಲುವನ್ನು ಗೌಪ್ಯವಾಗಿಟ್ಟುಕೊಂಡಿದೆ.

ಬೊಮ್ಮಾಯಿ ಮಂತ್ರಿಮಂಡಲದಲ್ಲಿನ ಹತ್ತರಿಂದ ಹನ್ನೆರಡು ಸಚಿವರನ್ನು ಕೈಬಿಟ್ಟು ಪುನರ್ ರಚನೆ ಮಾಡುವ ಸಾಧ್ಯತೆಗಳ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಆದರೆ, ಚುನಾವಣೆ ಒಂದು ವರ್ಷವಿರುವಾಗ ಹೆಚ್ಚು ಸಚಿವರನ್ನ ಕೈಬಿಟ್ಟರೆ ಮಂತ್ರಿಸ್ಥಾನ ಕಳೆದುಕೊಂಡವರ ಅಸಮಾಧಾನ ಮತ್ತು ಬಂಡಾಯ ಚಟುವಟಿಕೆಗಳ ಭೀತಿ ಹೈಕಮಾಂಡ್ ಅನ್ನು ಕಾಡುತ್ತಿದೆ.

ಬಿಜೆಪಿ ಸರ್ಕಾರದ ಎರಡು ಅವ ಮತ್ತು ಹಿಂದಿನ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾದವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಹೈಕಮಾಂಡ್ ಪರಿಶೀಲನೆ ನಡೆಸುತ್ತಿದೆ. ಪುನರ್ ರಚನೆ ಮಾಡಿದರೆ ಹದಿನೈದಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳಿಗೆ ಅಕಾರ ನೀಡುವ ಅವಕಾಶವಿದೆ. ಜಾತಿವಾರು, ಪ್ರಾದೇಶಿಕವಾರು ಹಾಗೂ ಹೊಸ ಮುಖಗಳಿಗೆ ಮಂತ್ರಿ ಸ್ಥಾನ ನೀಡಬಹುದಾಗಿದೆ.

ಈ ಮೂಲಕ ಕ್ಯಾಬಿನೆಟ್‍ನಲ್ಲಿನ ಅಸಮಾತೋಲನ ಸರಿದೂಗಿಸುವ ಬಗ್ಗೆಯೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯತೊಡಗಿದೆ. ಸಂಪುಟ ಪುನರ್ ರಚನೆಯಿಂದ ಉಂಟಾಗುವ ಅಸಮಾಧಾನವನ್ನು ಹೊಸ ಮುಖಗಳಿಗೆ ಅವಕಾಶ ನೀಡುವ ಬ್ಯಾಲೆನ್ಸ್ ತಂತ್ರಗಾರಿಕೆ ಮೂಲಕ ಸರಿದೂಗಿಸಬಹುದಲ್ಲ ಎಂಬ ಕುರಿತೂ ಹೈಕಮಾಂಡ್ ಸಮಾಲೋಚನೆ ನಡೆಸುತ್ತಿದೆ.

ಹೈಕಮಾಂಡ್ ನಿರ್ಣಯ ವಿಳಂಬ: ಈ ತಿಂಗಳ ಅಂತ್ಯದ ವೇಳೆಗೆ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಅಂತಿಮ ನಿರ್ಧಾರ ತಗೆದುಕೊಳ್ಳುತ್ತದೆ ಎಂದು ಹೇಳಲಾಗಿತ್ತು. ಆದರೆ, ಹೈಕಮಾಂಡ್ ಇನ್ನೂ ಸಭೆ ಸೇರಿ ಯಾವುದೇ ತೀರ್ಮಾನಕ್ಕೆ ಬರದಿರುವುದು ಮತ್ತಷ್ಟು ವಿಳಂಬದ ಮುನ್ಸೂಚನೆ ನೀಡಿದೆ.

ಮೇ ತಿಂಗಳ ಮೊದಲ ವಾರ ಹೈಕಮಾಂಡ್ ಸಭೆ ಸೇರಿ ಸಂಪುಟ ವಿಸ್ತರಣೆ ಬಗ್ಗೆ ತನ್ನ ನಿಲುವು ತಿಳಿಸುವ ಸಾಧ್ಯತೆಗಳಿವೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.