ಬೆಂಗಳೂರು,ಫೆ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ನವದೆಹಲಿ ಪ್ರವಾಸಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ಮತ್ತೆ ಕೇಸರಿ ಪಾಳಯದಲ್ಲಿ ಸಂಚಲನ ಆರಂಭವಾಗಿದ್ದು, ಸಚಿವಾಕಾಂಕ್ಷಿಗಳಲ್ಲಿ ಆಸೆ ಗರಿಗೆದರಿದರೆ, ಕೆಲ ಸಚಿವರಲ್ಲಿ ಆತಂಕ ಮನೆ ಮಾಡಿದೆ. ನಿಗಮ ಮಂಡಳಿಗಳ ಆಕಾಂಕ್ಷಿಗಳೂ ಅವಕಾಶದ ನಿರೀಕ್ಷೆಯಲ್ಲಿ ಗರಿ ಗರಿ ರಿಸು ಸಿದ್ಧ ಮಾಡಿಕೊಂಡಿದ್ದಾರೆ. ಇದೆಲ್ಲದರ ನಡುವೆ ಸಿಎಂ ಸದ್ದಿಲ್ಲದೆ ಹೈಕಮಾಂಡ್ ಭೇಟಿಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಸಂಪುಟ ಸರ್ಕಸ್ ಪ್ರಹಸನ: ಮತ್ತೆ ಸಂಪುಟ ಸರ್ಕಸ್ ಪ್ರಹಸನ ಶುರುವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಖಾಲಿ ಉಳಿದಿರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಜೊತೆಗೆ ಕೆಲ ಹಿರಿಯರನ್ನು, ಕಳಪೆ ಸಾಧನೆ ಮಾಡಿರುವ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡುವ ಚಿಂತನೆ ನಡೆದಿದೆ. ಹೀಗಾಗಿ ಮುಖ್ಯಮಂತ್ರಿಗಳ ಸೋಮವಾರದ ದೆಹಲಿ ಪ್ರವಾಸ ಸಾಕಷ್ಟು ಕುತೂಹಲ ಕೆರಳಿಸಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂಪುಟ ಸೇರುವ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ದೆಹಲಿ ಮಟ್ಟದಲ್ಲೇ ಲಾಬಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕೂಡ ಇದೇ ಹಾದಿ ತುಳಿದಿದ್ದಾರೆ. ಉಭಯ ನಾಯಕರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಹಾವು – ಮುಂಗುಸಿಯಂತೆ ಕಚ್ಚಾಡುತ್ತಿದ್ದವರು ಇದೀಗ ಸಂಪುಟ ಸೇರಲು ಒಂದಾಗಿ ಅಚ್ಚರಿ ಮೂಡಿಸಿದ್ದಾರೆ.
ಬಹಿರಂಗ ಹೇಳಿಕೆ: ಅಸಮರ್ಥರನ್ನು ಕೈಬಿಟ್ಟು ಕೆಲಸ ಮಾಡುವವರಿಗೆ ಅವಕಾಶ ಕೊಡಿ ಎಂದು ಇಬ್ಬರು ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಸುದ್ದಿಗೋಷ್ಟಿಗಳನ್ನು ನಡೆಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ, ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸೇರಿದಂತೆ ಇನ್ನೂ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಲಾಬಿ ಮಾಡುತ್ತಿದ್ದಾರೆ. ನಾಯಕತ್ವ ಬದಲಾವಣೆ ವೇಳೆ ಸಿಎಂ ರೇಸ್ ನಲ್ಲಿದ್ದ ಶಾಸಕ ಅರವಿಂದ ಬೆಲ್ಲದ್ ಕೂಡ ಸಚಿವ ಸಂಪುಟ ಸೇರುವ ಪ್ರಯತ್ನ ನಡೆಸುತ್ತಿದ್ದಾರೆ.
ಕೆಲವು ಸಚಿವರನ್ನು ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಕೆಲ ಸಚಿವರು ಇಲಾಖೆಯ ಪ್ರಗತಿ ವರದಿಯನ್ನು ಬಿಡುಗಡೆ ಮಾಡಿ ತಮ್ಮ ಸಾಧನೆಯನ್ನು ಹೇಳಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವರಾದ ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ ಸೇರಿ ಕೆಲವರು ಇಲಾಖೆಯ ಸಾಧನಾ ವರದಿ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದಾರೆ. ಕೆಲ ಸಚಿವರು ಸಂಪುಟದಿಂದ ಕೈಬಿಡದಂತೆ ಮನವಿ ಮಾಡಿ ಇಲಾಖಾ ಸಾಧನೆಯ ವಿವರಗಳನ್ನೂ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ, ಸಂಪುಟದಲ್ಲಿ ಉಳಿಸಿಕೊಳ್ಳುವುದು ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಚಿವರಾದ ಎಸ್.ಟಿ.ಸೋಮಶೇಖರ್ ಸೇರಿದಂತೆ ಕಾಂಗ್ರೆಸ್,ಜೆಡಿಎಸ್ ತೊರೆದು ಬಿಜೆಪಿ ಸೇರಿ ಸಚಿವರಾದವರು. ಇಂತಹ ಹೇಳಿಕೆ ನೀಡಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ನಿಗಮ ಮಂಡಳಿಗಳ ಅಧ್ಯಕ್ಷರಾಗಿರುವ ಮಾಡಾಳು ವಿರೂಪಾಕ್ಷಪ್ಪ, ರಾಜುಗೌಡ ಸೇರಿದಂತೆ ಕೆಲವರು ನಿಗಮ ಮಂಡಳಿ ಬದಲು ಸಂಪುಟಕ್ಕೆ ಬರಲು ಯತ್ನಿಸುತ್ತಿದ್ದಾರೆ.
ಖಾಲಿ ಇರುವ ನಿಗಮ ಮಂಡಳಿಗಳಿಗೆ ನೇಮಕ ಹಾಗು ಎರಡು ವರ್ಷ ಪೂರ್ಣಗೊಳಿಸಿರುವ ಅಧ್ಯಕ್ಷರನ್ನು ಬದಲಿಸಿ ಹೊಸಬರಿಗೆ ಅವಕಾಶ ಕಲ್ಪಿಸುವ ಕುರಿತು ರಾಜ್ಯ ಬಿಜೆಪಿ ಮಟ್ಟದಲ್ಲಿ ಚರ್ಚೆ ನಡೆದಿದ್ದು, ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡುವ ಕುರಿತು ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿಗೆ ಕಳುಹಿಸಿಕೊಡಲಾಗಿದೆ.
ಈ ಪಟ್ಟಿಯೊಂದಿಗೆ ದೆಹಲಿಗೆ ಹಾರಲಿರುವ ಸಿಎಂ ಬೊಮ್ಮಾಯಿ ಅವರು, ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಸೋಮವಾರದ ದೆಹಲಿ ಭೇಟಿ ವೇಳೆ ಸಚಿವ ಸಂಪುಟ ಚರ್ಚೆ ವೇಳೆ ನಿಗಮ ಮಂಡಳಿ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಸಂಪುಟ ಪುನಾರಚನೆಯೋ, ನಿಗಮ ಮಂಡಳಿ ನೇಮಕಾತಿಯೋ ಅಥವಾ ರಾಜ್ಯದ ವಿಚಾರಗಳ ಕುರಿತು ಚರ್ಚೆಗಷ್ಟೇ ಈ ಭೇಟಿ ಸೀಮಿತವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
