ಸಂಪುಟ ಪುನಾರಚನೆಗೆ ಸದ್ಯಕ್ಕೆ ಬ್ರೇಕ್, ಆಕಾಂಕ್ಷಿಗಳಿಗೆ ನಿರಾಸೆ..!

Social Share

ಬೆಂಗಳೂರು,ಜ.17- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರಲು ಕಾತರದಿಂದ ಕಾಯುತ್ತಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೊಮ್ಮೆ ನಿರಾಶೆಯಾಗಿದೆ. ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ, ಪುನಾರಚನೆಗೆ ಚಿಂತನೆ ನಡೆಸಿದ್ದ ವರಿಷ್ಠರು, ಇದೀಗ ಪಂಚರಾಜ್ಯಗಳ ಚುನಾವಣೆಯತ್ತ ಗಮನ ಹರಿಸಿರುವುದರಿಂದ ಬಹುತೇಕ ರಾಜ್ಯ ಬಜೆಟ್ ಮಂಡನೆಯಾಗುವವರೆಗೂ ಕಾಯುವ ಅನಿವಾರ್ಯತೆ ಎದುರಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದ ನಂತರ ಬೊಮ್ಮಾಯಿ ಸಂಪುಟದಲ್ಲಿ ಮೇಜರ್ ಸರ್ಜರಿ ಮಾಡಿ, ಚುನಾವಣಾ ಸಂಪುಟ ರಚನೆಗೆ ನಡೆಸಲಾಗಿದ್ದ ಚಿಂತನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ರಾಜ್ಯ ಬಿಜೆಪಿ ಘಟಕ ಹಾಗೂ ಸಂಘ ಪರಿವಾರದ ಈ ಚಿಂತನೆಗೆ ಹೈಕಮಾಂಡ್ ಅಸ್ತು ಎಂದಿದ್ದರೂ ಇದಕ್ಕೆ ಪಂಚ ರಾಜ್ಯಗಳ ಚುನಾವಣೆ, ಕೊರೊನಾ 3ನೇ ಅಲೆ ಅಡ್ಡಿಯಾಗಿದೆ. ಹಾಗಾಗಿ, ಸದ್ಯಕ್ಕೆ ಬೊಮ್ಮಾಯಿ ಸಂಪುಟದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಮಾತುಗಳು ಸಿಎಂ ಆಪ್ತ ವಲಯದಿಂದ ಕೇಳಿ ಬರುತ್ತಿವೆ.
# ಹಿರಿಯರನ್ನು ಕೈಬಿಡುವ ಸಾಧ್ಯತೆ?:
ಸದ್ಯ ಬೊಮ್ಮಾಯಿ ಸಂಪುಟದಲ್ಲಿ 4 ಸ್ಥಾನಗಳು ಖಾಲಿ ಉಳಿದಿವೆ. ಇಲಾಖೆಗಳಲ್ಲಿ ಕಳಪೆ ಸಾಧನೆ ಮಾಡಿರುವ ಕೆಲ ಸಚಿವರನ್ನು ಕೈಬಿಡುವುದು ಹಾಗೂ ಕೆಲ ಹಿರಿಯ ನಾಯಕರನ್ನು ಸಂಪುಟದಿಂದ ಕೈಬಿಟ್ಟು ಸಂಘಟನೆಗೆ ಬಳಸಿಕೊಳ್ಳಲು ಚಿಂತಿಸಲಾಗಿದೆ.ಆರು ಮಂದಿಯನ್ನು ಕೈಬಿಟ್ಟರೆ ಒಟ್ಟು 10 ಸ್ಥಾನ ಖಾಲಿ ಆದಂತಾಗುತ್ತದೆ. ಮುಂದಿನ ಚುನಾವಣೆಗೆ ಅನುಕೂಲವಾಗುವಂತಹ ಯುವ ಮುಖಗಳಿಗೆ ಮಣೆ ಹಾಕಿ ಎಲೆಕ್ಷನ್ ಕ್ಯಾಬಿನೆಟ್ ರಚನೆ ಮಾಡಲು ಸಂಘ ಪರಿವಾರ ಚಿಂತನೆ ನಡೆಸಿತ್ತು.
ಇದಕ್ಕಾಗಿಯೇ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಪಕ್ಷದ ಚಿಂತನ ಬೈಠಕ್ ಆಯೋಜಿಸಲಾಗಿತ್ತು. ಅಲ್ಲಿ ಸಚಿವರ ಮೌಲ್ಯಮಾಪನ ಮಾಡಿ ಕೆಲವನ್ನು ಕೈಬಿಟ್ಟು ಹೊಸದಾಗಿ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ಮೂರನೇ ಅಲೆ ಕಾರಣಕ್ಕೆ ಬಿಜೆಪಿಯ ಚಿಂತನ ಬೈಠಕ್ ಮುಂದೂಡಿಕೆಯಾಗಿದೆ.
ಇದರ ನಡುವೆಯೂ ಸಂಕ್ರಾಂತಿ ನಂತರ ಬೊಮ್ಮಾಯಿ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎನ್ನಲಾಗಿತ್ತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲ ನಾಯಕರು ಈ ಸಂಬಂಧ ಹೇಳಿಕೆಗಳನ್ನೂ ನೀಡುತ್ತ ಬಂದಿದ್ದರು.
ಆದರೀಗ ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿರುವುದರಿಂದ ವರಿಷ್ಠರು ಉತ್ತರಪ್ರದೇಶ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಚುನಾವಣೆ ಮುಗಿಯುವವರೆಗೂ ಕರ್ನಾಟಕ ರಾಜ್ಯದ ಕಡೆ ತಲೆ ಹಾಕುವುದು ಅನುಮಾನ ಎಂದು ಹೇಳಲಾಗುತ್ತಿದೆ.ಹಾಗಾಗಿ ಸಂಪುಟದಿಂದ ಕೊಕ್ ಆಗುತ್ತಿದ್ದವರು ಇನ್ನೆರಡು ತಿಂಗಳು ಸೇಫ್ ಆಗಿದ್ದರೆ, ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಶೆಯಾದಂತಾಗಿದೆ.
# ಸಚಿವಾಕಾಂಕ್ಷಿಗಳ ಕಸರತ್ತು:
ರಾಜ್ಯ ಆಯವ್ಯಯ ಮಂಡನೆವರೆಗೂ ಸಂಪುಟದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ. ಹಾಗಾಗಿ ಪಂಚ ರಾಜ್ಯಗಳ ಚುನಾವಣೆ, ಬಜೆಟ್ ನಂತರವೇ ರಾಜ್ಯದಲ್ಲಿ ಸಂಪುಟ ಸರ್ಜರಿ ನಡೆಯಲಿದೆ. ಇದರಿಂದಾಗಿ ಮತ್ತೆ ರಾಜ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಪ್ರತ್ಯೇಕ ಸಭೆಗಳಂತಹ ಚಟುವಟಿಕೆ ಆರಂಭಗೊಂಡಿವೆ.
ಇತ್ತೀಚೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಕೆಲ ಶಾಸಕರು ಸಭೆ ನಡೆಸಿರುವುದೇ ಇದಕ್ಕೆ ನಿದರ್ಶನವಾಗಿದೆ. ರೇಣುಕಾಚಾರ್ಯ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಅವಕಾಶ ಸಿಗದೇ ಇರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ, ಯಾವ ರೀತಿ ಸಂಪುಟ ಸರ್ಜರಿ ನಡೆಯಲಿದೆ, ಹೈಕಮಾಂಡ್‍ನ ಲೆಕ್ಕಾಚಾರ ಏನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ.
# ಡಿಸಿಎಂ ಸ್ಥಾನ :
ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಚುನಾವಣೆಗೆ ಮುನ್ನವೇ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆದರೆ, ಸರ್ಕಾರ ರಚನೆಯಾಗಿ ಮೂರು ವರ್ಷವಾಗುತ್ತ ಬಂದರೂ ಅವರಿಗೆ ಡಿಸಿಎಂ ಸ್ಥಾನ ಸಿಕ್ಕಿಲ್ಲ.
ಈಗ ಬೊಮ್ಮಾಯಿ ಸಂಪುಟದಲ್ಲೂ ಡಿಸಿಎಂ ಸ್ಥಾನ ಕಲ್ಪಿಸಿಲ್ಲ. ಹೀಗಾಗಿ ಶ್ರೀರಾಮುಲು ಅವಕಾಶ ವಂಚಿತರಾಗಿದ್ದಾರೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮತ ಬುಟ್ಟಿ ಭದ್ರಪಡಿಸಿಕೊಳ್ಳಲು ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಚರ್ಚೆ ಕೂಡ ಪಕ್ಷದ ವಲಯದಲ್ಲಿ ನಡೆದಿದೆ ಎನ್ನಲಾಗಿದೆ.
ಸಂಕ್ರಾಂತಿಗೆ ಸಂಪುಟ ಸರ್ಜರಿಯಾ ಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಪಂಚರಾಜ್ಯಗಳ ಚುನಾವಣೆ ಮುಗಿಯುವ ವರೆಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಕಾಯುವುದು ಅನಿವಾರ್ಯವಾಗಿದೆ.

Articles You Might Like

Share This Article