ಸಂಕ್ರಾಂತಿ ನಂತರ ಸಂಪುಟ ಸರ್ಜರಿ ನಿಶ್ಚಿತ

Social Share

ಬೆಂಗಳೂರು,ಜ.6- ಆಡಳಿತಾರೂಢ ಬಿಜೆಪಿಯಲ್ಲಿ ಪದೇ ಪದೇ ಉಂಟಾಗುತ್ತಿರುವ ಅಸಮಾಧಾನ, ನಾಯಕತ್ವ ಗೊಂದಲ, ಇತ್ತೀಚೆಗೆ ನಡೆದ ಚುನಾವಣೆ ಹಿನ್ನಡೆ ಸೇರಿದಂತೆ ಸಂಕ್ರಾಂತಿ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಪುನಾರಚನೆ ಹಾಗೂ ನಿಗಮ ಮಂಡಳಿ ನೇಮಕಾತಿಗಳ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗತ್ತದೆ.
ವಿಧಾನಪರಿಷತ್ ಮತ್ತು ಕೆಲವು ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರ ಬಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯವನ್ನು ನಾಯಕರಿಗೆ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಕಳಪೆ ಕಾರ್ಯಕ್ಷಮತೆ ತೋರಿರುವ ಸಚಿವರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆಯಿದೆ. ನಿಗಮ ಮಂಡಳಿ ಅಧ್ಯಕ್ಷರಿಗೆ ರಾಜಿನಾಮೆ ನೀಡಲು ಜನವರಿ ಅಂತ್ಯದದವರೆಗೆ ಸಮಯ ನೀಡಲಾಗುವುದು. ಆದರೆ, ಸಂಕ್ರಾಂತಿ ನಂತರ ಮಹತ್ತರವಾದ ಬದಲಾವಣೆಯಾಗಲಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ಚರ್ಚೆಯಾಗುತ್ತಿರುವ ನಾಯಕತ್ವ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಸಂದೇಶ ನೀಡಲಿದ್ದಾರೆ. ನಾಯಕತ್ವ ಬದಲಾವಣೆ ಗುಸು ಗುಸು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಡ್ಡಾ ಅಖಾಡಕ್ಕಿಳಿಯುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
2023ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಪಕ್ಷದ ರಾಜ್ಯ ನಾಯಕತ್ವದ ಕೂಲಂಕಷ ಪರೀಕ್ಷೆ ನಿರೀಕ್ಷಿಸಲಾಗಿದ್ದರೂ, ಬೇರೆ ರೀತಿಯ ಊಹಾಪೋಹಗಳಿಗೆ ತೆರೆ ಎಳೆಯಬೇಕಾಗಿದೆ. ಪಕ್ಷದ ಕೇಂದ್ರ ನಾಯಕತ್ವವು ಆಡಳಿತ ವಿರೋಧ ಮತ್ತು ಆಂತರಿಕ ಕಚ್ಚಾಟದ ವಿರುದ್ದ ಹೋರಾಡಬೇಕಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಜ.8 ಮತ್ತು 9ರಂದು ಬೆಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಮತ್ತೊಂದು ಸುತ್ತಿನ ಚುನಾವಣಾ ಪೂರ್ವ ತಯಾರಿ ಕಾರ್ಯಕ್ರಮ ನಡೆಸುವ ಸಾಧ್ಯತೆಯಿದೆ.
ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿರುವ ಹಿರಿಯ ನಾಯಕರಾದ ವಿಶೇಷವಾಗಿ ಕೆ.ಎಸ್. ಈಶ್ವರಪ್ಪ ಮತ್ತು ಮುರುಗೇಶ್ ನಿರಾಣಿಗೆ ಎಚ್ಚರಿಕೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಎಂಎಲ್‍ಸಿ ಚುನಾವಣೆ ವೇಳೆ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡ ನಾಯಕರ ವಿರುದ್ಧ ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುವುದು.
ಅಲ್ಲದೆ, ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷ ತೊರೆಯಲು ಮುಂದಾಗಿರುವವರನ್ನು ವಜಾಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಕಿರಿಯ ಸಹೋದರ ಲಖನ್ ಸ್ರ್ಪಧಿಸಿ ಗೆದ್ದ ನಂತರ ಬೆಳಗಾವಿಯ ಉಭಯ ಕ್ಷೇತ್ರದಲ್ಲಿ ಪಕ್ಷದ ಅಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಅನುಭವಿಸಿದ ಸೋಲನ್ನು ಹೈಕಮಾಂಡ್ ಗಮನಿಸಿದೆ ಎಂದು ಮೂಲಗಳು ತಿಳಿಸಿವೆ.

Articles You Might Like

Share This Article