ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ, ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ

ಬೆಂಗಳೂರು, ಮೇ 21- ಈ ಬಾರಿಯಾದರೂ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಮನಸ್ಸಿನಲ್ಲೇ ಮಂಡಕ್ಕಿ ಮೇಯ್ದಿದ್ದ ಆಕಾಂಕ್ಷಿಗಳಿಗೆ ಹೈಕಮಾಂಡ್ ಮತ್ತೆ ತಣ್ಣೀರೆರಚಿದೆ. ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಮಾಡಲು ಮುಖ್ಯಮಂತ್ರಿ ದೆಹಲಿಗೆ ತೆರಳಿದ್ದಾರೆ ಎಂದು ಆಕಾಂಕ್ಷಿಗಳು ಮನಸ್ಸಿನಲ್ಲೇ ಕನಸು ಕಂಡಿದ್ದರು.

ಆದರೆ, ವರಿಷ್ಠರು ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆವರೆಗೂ ವಿಸ್ತರಣೆಯಾಗಲಿ, ಪುನಾರಚನೆಯಾಗಲಿ ಸದ್ಯಕ್ಕಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದನ್ನು ಖಚಿತಪಡಿಸಿದ್ದು, ಸಂಪುಟ ವಿಸ್ತರಣೆ ಆಥವಾ ಪುನಾರಚನೆ ಬಗ್ಗೆ ವರಿಷ್ಠರ ಬಳಿ ಚರ್ಚೆ ನಡೆಸಿಲ್ಲ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರನ್ನು ಭೇಟಿಯಾಗಲು ದೆಹಲಿಗೆ ಆಗಮಿಸಿದ್ದೆ. ಆದರೆ, ತುರ್ತು ಕಾರ್ಯದಲ್ಲಿ ಪಾಲ್ಗೊಳ್ಳಬೇಕಾದ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ದೂರವಾಣಿ ಮೂಲಕವೇ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.

ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಮಾತುಕತೆ ನಡೆಸಲಾಗಿದೆ. ಪಕ್ಷದ ಮುಖಂಡರ ಜತೆ ಚರ್ಚಿಸಿದ ಬಳಿಕ ಪಟ್ಟಿಗೆ ಅಂತಿಮ ಮುದ್ರೆ ಸಿಗಲಿದೆ ಎಂದರು. ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಅವರ ಜತೆ ಮಾತುಕತೆ ನಡೆಸುವಂತೆ ಅಮಿತ್ ಷಾ ಅವರು ಸೂಚನೆ ನೀಡಿದ್ದರು.

ಅದರಂತೆ ಇಂದು ಬೆಳಗ್ಗೆ ಅವರ ಜತೆ ಮಾತುಕತೆ ನಡೆಸಲಾಗಿದೆ. ಕೋರ್ ಕಮಿಟಿ ಕಳುಹಿಸಿಕೊಟ್ಟಿರುವ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಗೆ ಪಕ್ಷದ ಪ್ರಮುಖರ ಜತೆ ಚರ್ಚಿಸಿ ಶೀಘ್ರದಲ್ಲೇ ಪಟ್ಟಿ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಲ್ಕು ದಿನ ಕಾಲಾವಕಾಶವಿದೆ. ಆದಷ್ಟು ಬೇಗ ಪಟ್ಟಿ ಅಂತಿಮಗೊಳಿಸಬೇಕೆಂದು ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಕಳುಹಿಸಿಕೊಡುವ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದರು.

ರಾಜ್ಯಸಭಾ ಚುನಾವಣೆಗೆ ಸಮಯಾವಕಾಶ ಇರುವುದರಿಂದ ಯಾರನ್ನು ಆಯ್ಕೆಮಾಡಬೇಕು ಎಂಬುದರ ಕುರಿತು ವರಿಷ್ಠರೇ ತೀರ್ಮಾನಿಸಲಿದ್ದಾರೆ. ಕೋರ್ ಕಮಿಟಿ ಕಳುಹಿಸಿಕೊಟ್ಟಿರುವ ಪಟ್ಟಿಯನ್ನು ಪರಿಶೀಲಿಸಿ ನಂತರ ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.ಇದೇ 23ರಂದು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಸಂಬಂಧ ಹೈಕೋರ್ಟ್‍ನಲ್ಲಿ ಅರ್ಜಿಯ ವಿಚಾರಣೆ ನಡೆದಿದೆ.

ನಿನ್ನೆಯಷ್ಟೆ ಸುಪ್ರೀಂಕೋರ್ಟ್ ಬಿಬಿಎಂಪಿ ಚುನಾವಣೆಯನ್ನು ನಡೆಸಲು ಆದೇಶ ನೀಡಿದೆ. ಹೀಗಾಗಿ ಚುನಾವಣೆ ಎದುರಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ವಿವರಿಸಿದರು.  ದಾವೋಸ್ ಪ್ರವಾಸ ಕುರಿತಾಗಿ ಪ್ರತಿಕ್ರಿಯಿಸಿದ ಸಿಎಂ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.