ಮತ್ತೆ ಮತ್ತೆ ಸಂಪುಟ ವಿಸ್ತರಣೆ ಮುಂದೂಡಿಕೆ, ಬಿಜೆಪಿಯಲ್ಲಿ ಹಲವಾರು ರೀತಿಯ ಚರ್ಚೆ

Spread the love

ಬೆಂಗಳೂರು,ಮೇ16- ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಿರಂತರವಾಗಿ ಮುಂದೂಡುತ್ತಿರುವ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಹಲವಾರು ರೀತಿಯ ಚರ್ಚೆಗೆ ಗ್ರಾಸವಾಗುತ್ತಿದೆ. ಪಕ್ಷದ ಹೈಕಮಾಂಡ್ ಮೇಲಿಂದ ಮೇಲೆ ಸಂಪುಟ ಪುನಾರಚನೆಯ ವಿಷಯವನ್ನು ಮುಂದೂಡುತ್ತಿರುವುದಕ್ಕೆ ಬೇಸರಗೊಂಡಿರುವ ಅನೇಕ ಶಾಸಕರು ಸಚಿವ ಸ್ಥಾನದ ಆಸೆಯನ್ನೇ ಕಳೆದುಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಇರುವುದರಿಂದ ಬಹುತೇಕ ಶಾಸಕರು ಈ ಸಂದರ್ಭದಲ್ಲಿ ಸಂಪುಟದಲ್ಲಿ ಅವಕಾಶ ಸಿಗದಿದ್ದರೆ, ಸಚಿವರಾಗುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇರುವ ಕಡಿಮೆ ಅವಧಿಯಲ್ಲಿ ಸಚಿವರಾಗಿ ಇಲಾಖೆಯನ್ನು ಅರ್ಥ ಮಾಡಿಕೊಂಡು ಜನರಿಗೆ ನ್ಯಾಯ ಒದಗಿಸಲು ಆಗುವುದಿಲ್ಲ. ಅದರ ಜೊತೆಗೆ ಕ್ಷೇತ್ರದ ಕಡೆಗೂ ಹೆಚ್ಚಿನ ಗಮನ ಕೊಡಲು ಸಾಧ್ಯವಾಗ ಕಾರಣ ಈ ಸಂದರ್ಭದಲ್ಲಿ ಸಚಿವರಾಗುವುದರಿಂದ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಸಾಧ್ಯ ಇದೆ ಎಂಬ ಅಭಿಪ್ರಾಯವೂ ಕೆಲವು ಶಾಸಕರಲ್ಲಿ ಮೂಡಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ 9 ತಿಂಗಳು ಪೂರೈಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲೂ ನಾಯಕತ್ವ ದ ಬಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪಕ್ಷದಲ್ಲಿನ ಈ ಬೆಳವಣಿಗೆಗಳ ಬಗ್ಗೆ ಸ್ವತಃ ಬೊಮ್ಮಾಯಿ ಅವರೇ ಬೇಸರಗೊಂಡಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿರುವುದು ಪಕ್ಷ ಹಾಗೂ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಪ್ರಸ್ತಾಪ ಬಿಜೆಪಿ ಹೈಕಮಾಂಡ್ ಮುಂದೂಡುತ್ತಿರುವುದಕ್ಕೂ ನಾಯಕತ್ವ ಬದಲಾವಣೆಗೆ ಸಂಬಂಧ ಕಲ್ಪಿಸುತ್ತಿರುವುದು ಬಿಜೆಪಿಯಲ್ಲಿ ಹಲವಾರು ರೀತಿಯ ಚರ್ಚೆಗೆ ಕಾರಣವಾಗಿದೆ. ಮೈತ್ರಿ ಸರ್ಕಾರ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಅನರ್ಹ ಶಾಸಕರಲ್ಲಿ ಮೂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂಬತ್ತು ತಿಂಗಳಲ್ಲಿ ಎರಡು ಬಾರಿ ದೆಹಲಿ ಪ್ರವಾಸ ಕೈಗೊಂಡಿದ್ದು, ಪ್ರತಿ ಬಾರಿಯೂ ಸಂಪುಟ ಪುನಾರಚನೆಯ ವಿಷಯ ಮುನ್ನಲೆಗೆ ಬಂದರೂ, ಪುನಾರಚನೆ ಇರಲಿ, ಖಾಲಿ ಇರುವ ಐದು ಸ್ಥಾನಗಳನ್ನು ಭರ್ತಿ ಮಾಡಲೂ ಆಗದಿರುವುದು ಸಚಿವಾಕಾಂಕ್ಷಿಗಳಲ್ಲಿ ಸಾಕಷ್ಟು ಬೇಸರ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ ಸಿಎಂ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊವಿಡ್,  ಪಂಚರಾಜ್ಯ ಚುನಾವಣೆಗಳು, ವಿಧಾನಪರಿಷತ್ ಚುನಾವಣೆಗಳು, ನಗರ ಸ್ಥಳೀಯ ಸಂಸ್ಥೆಗಳು, ಅವೇಶನ ಹೀಗೆ ಸಂಪುಟ ಪುನಾರಚನೆ ಮುಂದೂಡಿಕೆಗೆ ಒಂದಿಲ್ಲೊಂದು ಕಾರಣ ಹೇಳಲಾಗುತ್ತಿತ್ತು.
ಆದರೆ ಪಕ್ಷದ ಹೈಕಮಾಂಡ್ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸದೇ ಇರುವುದಕ್ಕೆ ಸಚಿವಾಕಾಂಕ್ಷಿಗಳಿಗಷ್ಟೇ ಅಲ್ಲ, ರಾಜ್ಯದ ಅನೇಕ ಹಿರಿಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಖಾಲಿ ಇರುವ ಐದು ಸ್ಥಾನ ಹಾಗೂ ಹೊಸಬರಿಗೆ ಸಂಪುಟ ಸೇರಲು ಅವಕಾಶ ಕಲ್ಪಿಸಬೇಕೆಂದು ಅನೇಕ ಶಾಸಕರು ನಿರಂತರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಕೂಡ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಹೇಗಾದರೂ ಮಾಡಿ ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಾಸಕರು ಹಾಗೂ ನಾಯಕರುಗಳ ಒತ್ತಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲಿಂದ ಮೇಲೆ ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ಸಂಪುಟ ಪುನಾರಚನೆಯ ಪಸ್ತಾಪ ಮುಂದಿಟ್ಟರೂ, ಹೈಕಮಾಂಡ್ ನಾಯಕರು ತಲೆ ಕೆಡಿಸಿಕೊಳ್ಳದಿರುವುದು ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಸೂತ್ರಧಾರಿಯಾಗಿ ಕೆಲಸ ಮಾಡಿ ಕೊನೆಗೂ ದೋಸ್ತಿ ಸರ್ಕಾರವನ್ನು ಬೀಳಿಸುವಲ್ಲಿ ಸಫಲರಾಗಿದ್ದರು.
ನಂತರ ಅವರ ಮೇಲೆ ಆರೋಪ ಕೇಳಿ ಬಂದಿದ್ದರಿಂದ ರಾಜೀನಾಮೆ ನೀಡಲಾಯಿತು. ಎಸ್‍ಐಟಿಬಿ ರಿಪೋರ್ಟ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

ಪುನಃ ತಮಗೆ ಮಂತ್ರಿಗಿರಿ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಇದರ ನಡುವೆ ಬಿಜೆಪಿ ಸರ್ಕಾರದಲ್ಲಿ ಜಾರಕಿಹೊಳಿ ಕುಟುಂಬದವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಇದರಿಂದ ರಮೇಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

Facebook Comments