ಬೆಂಗಳೂರು,ಜ.24-ಶಾಸಕರ ಒತ್ತಡಕ್ಕೆ ಬಿಲ್‍ಕುಲ್ ಕ್ಯಾರೆ ಎನ್ನದ ಕೇಂದ್ರ ಬಿಜೆಪಿ ವರಿಷ್ಠರು ಪಂಚರಾಜ್ಯಗಳ ವಿಧಾನಸಭೆ ಫಲಿತಾಂಶ ಹಾಗೂ ಸರ್ಕಾರ ರಚನೆ ಪ್ರಕ್ರಿಯೆ ಮುಗಿಯುವವರೆಗೂ ಬಹುನಿರೀಕ್ಷಿತ ಸಚಿವ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆಗೆ ಕೈ ಹಾಕದಿರಲು ತೀರ್ಮಾನಿಸಿದೆ.
ಚುನಾವಣಾ ವರ್ಷ ಆಗಿರುವುದರಿಂದ ಖಾಲಿ ಇರುವ ನಾಲ್ಕು ಸ್ಥಾನಗಳ ಜೊತೆಗೆ ಕೆಲವು ಅದಕ್ಷ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ಸಂಪುಟ ಪುನಾರಚನೆ ನಡೆಯಬೇಕೆಂಬುದು ಬಹುತೇಕರ ಬೇಡಿಕೆಯಾಗಿತ್ತು.
ಇತ್ತೀಚೆಗಷ್ಟೇ ಶಾಸಕರಾದ ಬಸವನಗೌಡ ಪಾಟೀಲ್‍ಯತ್ನಾಳ್, ಎಂ.ಪಿ.ರೇಣುಕಾಚಾರ್ಯ ಹಾಗೂ ನಿನ್ನೆಯಷ್ಟೇ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಸ್ಥಳೀಯ ಶಾಸಕರು ಸಭೆ ನಡೆಸಿ ಶೀಘ್ರದಲ್ಲೇ ಸಂಪುಟ ಪುನಾರಚನೆಯಾಗಬೇಕೆಂಬ ಒತ್ತಡ ಹಾಕಿದ್ದರು.
ಇದೆಲ್ಲವನ್ನು ಗಮನಿಸಿರುವ ದೆಹಲಿ ವರಿಷ್ಠರು ಉತ್ತರಪ್ರದೇಶ, ಉತ್ತರಖಂಡ್, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಫಲಿತಾಂಶದ ನಂತರ ಸರ್ಕಾರ ರಚನೆ ಪ್ರಕ್ರಿಯೆಗಳು ಮುಗಿಯುವವರೆಗೂ ಕರ್ನಾಟಕದ ಯಾವುದೇ ಬೆಳವಣಿಗೆಗಳ ಬಗ್ಗೆ ಗಮನಹರಿಸದಿರಲು ತೀರ್ಮಾನಿಸಿದ್ದಾರೆ.
ಟಿಕೆಟ್ ಹಂಚಿಕೆ, ಚುನಾವಣಾ ಪ್ರಚಾರ, ಕಾರ್ಯತಂತ್ರ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ವರಿಷ್ಠರು ತಲೀನರಾಗಿರುವುದರಿಂದ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಗಮನಹರಿಸಿಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆ ಇಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಬಿಜೆಪಿ ನಾಯಕರು ಸಂಪುಟ ಪುನಾರಚನೆ, ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಸೇರಿದಂತೆ ಯಾವುದೇ ವಿಷಯಗಳ ಬಗ್ಗೆ ಶಾಸಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಸೂಕ್ತ ಸಂದರ್ಭದಲ್ಲಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ. ಯಾವಾಗ ಸಂಪುಟ ಪುನಾರಚನೆ ಮಾಡಬೇಕು, ಯಾವಾಗ ವಿಸ್ತರಣೆ ಮಾಡಬೇಕು ಎಂಬುದರ ಬಗ್ಗೆ ನಮಗೆ ಮಾಹಿತಿ ಇದೆ. ಹಾದಿಬೀದಿಯಲ್ಲಿ ಚರ್ಚೆ ಮಾಡುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಬ್ಲಾಕ್‍ಮೇಲ್ ತಂತ್ರಕ್ಕೆ ನಾವು ಬಗ್ಗುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ, 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ನಮಗೆ ಅತ್ಯಂತ ಮಹತ್ವದ್ದಲು ಕಡೆಪಕ್ಷ 3ರಿಂದ 4 ರಾಜ್ಯಗಳಲ್ಲಿ ಅಕಾರ ಹಿಡಿದರೆ ಜನಾದೇಶ ಬಿಜೆಪಿ ಪರವಾಗಿದೆ ಎಂಬುದನ್ನು ಬಿಂಬಿಸಬೇಕು.
ಸಂಪುಟ ತತ್‍ಕ್ಷಣವೇ ರಚನೆಯಾಗದಿದ್ದರೆ ಕಳೆದುಕೊಳ್ಳುವಂಥದ್ದು ಏನಿಲ್ಲ. ಏನೇ ಸಮಸ್ಯೆಗಳಿದ್ದರೂ ಶಾಸಕರು, ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ ಅವರ ಬಳಿ ಚರ್ಚಿಸಬಹುದು. ಹಾದಿಬೀದಿಯಲ್ಲಿ ಮಾತನಾಡುವವರ ಬಗ್ಗೆ ನಾವು ನಿಗಾವಹಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಶಾಸಕರ ಒತ್ತಡ:
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಜೊತೆಗೆ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಪುನಾರಚನೆಯಾಗ ಬೇಕೆಂಬುದು ಹಲವು ಶಾಸಕರ ಒತ್ತಡವಾಗಿದೆ. 2006, 2008ರಿಂದ 2013 ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಪದೇ ಪದೇ ಅಧಿಕಾರ ಅನುಭವಿಸಿದವರು ಹಾಗೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅದಕ್ಷರಿಗೆ ಕೋಕ್ ನೀಡಿ, ಹೊಸ ಮುಖಗಳಿಗೆ ಆದ್ಯತೆ ಕೊಡಬೇಕೆಂಬುದು ಹಲವರ ಒತ್ತಡವಾಗಿತ್ತು.
ಖಾಲಿ ಇರುವ ನಾಲ್ಕು ಸ್ಥಾನಗಳು ಹಾಗೂ ಹಿರಿಯರ ಜತೆಗೆ 8ರಿಂದ 10 ಸಚಿವರನ್ನು ಕೈಬಿಟ್ಟು ಮುಖ್ಯಮಂತ್ರಿ ಹೊರತುಪಡಿಸಿ ಗುಜರಾತ್ ಮಾದರಿಯಂತೆ ಇಲ್ಲೂ ಕೂಡ ಸಂಪುಟ ವಿಸ್ತರಣೆ ಮಾಡಬೇಕೆಂದು ಶಾಸಕರು ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.
ಹಾವು-ಮುಂಗೂಸಿಯಂತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ.ರೇಣುಕಾಚಾರ್ಯ, ತಮ್ಮ ವೈಮನಸ್ಸು ಮರೆತು ಒಂದಾಗಿದ್ದು, ಶಾಸಕರಾದ ರಾಜುಗೌಡ ನಾಯಕ್, ಮಾಡಾಳು ವಿರೂಪಾಕ್ಷಪ್ಪ, ರಾಮಚಂದ್ರಪ್ಪ, ಪ್ರೊ.ಲಿಂಗಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಎಸ್.ಎ.ರಾಮದಾಸ್, ಕರುಣಾಕರ ರೆಡ್ಡಿ ಸೇರಿದಂತೆ ಅನೇಕರು ಸಂಪುಟ ಪುನಾರಚನೆಯಾಗಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ಸದ್ಯಕ್ಕೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿರುವುದರಿಂದ ಜೇನುಗೂಡಿಗೆ ಕೈ ಹಾಕಿದರೆ ಸಮಸ್ಯೆಗಳು ಭಿನ್ನಮತ ಸೋಟಗೊಳ್ಳಬಹುದೆಂಬ ಕಾರಣಕ್ಕಾಗಿ ಪುನಾರಚನೆಗೆ ಮೀನಾಮೇಷ ಎಣಿಸುತ್ತಿದೆ.
ಯಾರನ್ನೇ ಸಂಪುಟಕ್ಕೆ ತೆಗೆದುಕೊಂಡರೆ ಉಳಿದ ಕೆಲವರ ಕಣ್ಣು ಕೆಂಪಾಗುವುದು ದಿಟ ಎಂಬ ಸುಳಿವು ಸಿಕ್ಕಿರುವುದರಿಂದಲೇ ಸಿಎಂ ಬೊಮ್ಮಾಯಿ ಕೂಡ ಎಲ್ಲವನ್ನೂ ಮೌನದಿಂದಲೇ ನೋಡುತ್ತಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಮಾರ್ಚ್ ತಿಂಗಳ ನಂತರವೇ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಹೇಳುತ್ತಿದ್ದಾರೆ.
