ನವದೆಹಲಿ, ಆ.9- ಸ್ವಾಯತ್ತ ಸ್ಥಾನ-ಮಾನ ಹೊಂದಿರುವ ಕೇಂದ್ರ ಲೆಕ್ಕಪರಿಶೋಧಕರ ಸಂಸ್ಥೆ (ಸಿಎಜಿ) ಸಂಸ್ಥೆ ಹೊಸ ವರದಿಯೊಂದು ನೀಡಿದ್ದು, ಅದರಲ್ಲಿ 2015 ರಿಂದ 2020ರ ನಡುವೆ ಅಸಮರ್ಪಕ ತಜ್ಞರ ವರದಿ ಪಾಲನೆ ಮಾಡಿ, ಪರಿಸರಕ್ಕೆ ಧಕ್ಕೆಯಾಗುವಂತೆ ಕರಾವಳಿ ತೀರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂಬಆಕ್ಷೇಪ ವ್ಯಕ್ತ ಪಡಿಸಿದೆ.
2019ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಕರಾವಳಿ ವಲಯ ಸಂರಕ್ಷಣೆ ನಿಯಮಗಳ ಪ್ರಕಾರ ಸಮುದ್ರದ ಏರಿಳಿತಗಳ ರೇಖೆಯಿಂದ 500 ಮೀಟರ್ ಅಂತರದಲ್ಲಿ, ಕೆರೆಗಳು, ತೊರೆಗಳು, ನದಿಮುಖಗಳು, ಹಿನ್ನೀರಿನನಿಂದ ಕನಿಷ್ಠ 100 ಮೀಟರ್ ಅಂತರದಲ್ಲಿ ಇರುವ ಜಾಗವನ್ನು ಕರಾವಳಿ ಭೂಮಿ ಎಂದು ನಿರ್ಧರಿಸಲಾಗಿದೆ.
ಇದನ್ನು CRZ ಎಂದು ಘೋಷಿಸಲಾಗಿದೆ. ಇಲ್ಲಿ ಮೀನುಗಾರಿಗೆ ಮತ್ತು ಜೀವನೋಪಾಯ ರಕ್ಷಣೆಗಾಗಿ ಹಾಗೂ ಸ್ಥಳೀಯ ಸಮುದಾಯಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. CRZ ನಿಯಮ ಪಾಲನೆಗೆ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕರಾವಳಿ ರಕ್ಷಣಾ ನಿರ್ವಹಣಾ ಮಂಡಳಿಗಳನ್ನು ರಚಿಸಲಾಗಿದೆ.
ಯಾವುದೇ ಯೋಜನೆಗೆ ಅಂಗೀಕಾರ ನೀಡುವ ಮೊದಲು ಪರಿಸರಕ್ಕೆ ಮತ್ತು ಸ್ಥಳೀಯ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ ಎಂದು ತಜ್ಞರ ವರದಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ತಜ್ಞರ ವರದಿ ಪಡೆಯುವುದರಲ್ಲೇ ಲೋಪವಾಗಿದೆ, ಸಮರ್ಪಕ ತಜ್ಞತೆ, ವಿಷಯ ಪರಿಣಿತಿ ಇಲ್ಲದ ಸೂಕ್ತ ಸೂಕ್ತ ಮಾನ್ಯತೆ ಪಡೆಯದ ಸಂಸ್ಥೆಗಳಿಂದ ವರದಿ ಪಡೆಯಲಾಗಿದೆ.
ಇದರಿಂದ ಪರಿಸರದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಸಿಎಜಿ ವರದಿ ನೀಡಿದೆ. 2015ರಿಂದ 2020ರ ನಡುವೆ ಕರ್ನಾಟಕದಲ್ಲಿ ರಾಜ್ಯ ಕರಾವಳಿ ಸಮಿತಿಯನ್ನೆ ರಚನೆ ಮಾಡಿಲ್ಲ. ಗೋವಾ, ಒಡಿಸ್ಸಾ, ಪಶ್ಚಿಮ ಬಂಗಾಳದಲ್ಲಿ ಸಮಿತಿ ರಚನೆಯಲ್ಲೇ ವಿಳಂಬವಾಗಿದೆ. ಹಲವು ಸಂದರ್ಭದಲ್ಲಿ ಸಮಿತಿಯ ಸಭೆಯಲ್ಲಿ ಕೋರಂ ಇಲ್ಲದೆ ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಕರಾವಳಿ ಭಾಗದಲ್ಲಿ ಜಾರಿಗೊಳಿಸಲಾದ ಯೋಜನೆಗಳಿಂದ ಪರಿಸರದ ಮೇಲೆ ಪರಿಣಾಮ ಬೀರಲಿದೆ ಎಂಬ ಆಕ್ಷೇಪವನ್ನು ಸಿಎಜಿ ವ್ಯಕ್ತ ಪಡಿಸಿದೆ.