ಬೆಂಗಳೂರು, ಮಾ.6- ಬಾಡಿಗೆಗೆ ಕ್ಯಾಮೆರಾ ಬೇಕೆಂದು ಫೋಟೋ ಸ್ಟುಡಿಯೋಗೆ ಬಂದು ಕ್ಯಾಮೆರಾಗಳನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಆರೋಪಿ ಯೊಬ್ಬನನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿ ಸುಮಾರು 3.65 ಲಕ್ಷ ಬೆಲೆ ಬಾಳುವ 4 ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಲೂರಿನ ನಿವಾಸಿ ಪುರುಷೋತ್ತಮ್ ಬಂಧಿತ ಆರೋಪಿ. ಈತ ಮೂಲತಃ ತಮಿಳುನಾಡಿನವನು. ಅಪರಿಚಿತ ವ್ಯಕ್ತಿಯೊಬ್ಬ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ಟುಡಿಯೋವೊಂದಕ್ಕೆ ಬಂದು ಬಾಡಿಗೆಗೆ ಕ್ಯಾಮೆರಾ ಬೇಕೆಂದು ಬಂದು ಸ್ಟುಡಿಯೋದಲ್ಲಿದ್ದ ಸುಮಾರು 50,000ರೂ. ಬೆಲೆ ಬಾಳುವ ಸೋನಿ ಎ-7 ಎಸ್-2 ಕ್ಯಾಮೆರಾವನ್ನು ಕಳವು ಮಾಡಿಕೊಂಡು ಹೋಗಿದ್ದ.
ಈ ಬಗ್ಗೆ ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿ ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಿದ್ದ ಸುಮಾರು 3,65,000ರೂ. ಬೆಲೆ ಬಾಳುವ ಕ್ಯಾನಾನ್ ಕಂಪೆನಿಯ ಮೂರು ಕ್ಯಾಮೆರಾಗಳು ಹಾಗೂ ನಿಕಾನ್ ಕಂಪೆನಿಯ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ಸ್‍ಪೆಕ್ಟರ್ ಮನೋಜ್ ಹೂವಳೆ ಹಾಗೂ ಅವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
