ನವದೆಹಲಿ,ಮಾ.3- ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿನ್ ಪುಟಿನ್ ಅವರಿಗೆ ಯುದ್ಧ ನಿಲ್ಲಿಸುವಂತೆ ಸೂಚಿಸಲು ಸಾಧ್ಯವೇ ಎಂದೇ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣಾ ಪ್ರಶ್ನಿಸಿದ್ದಾರೆ. ಉಕ್ರೇನ್ ಮತ್ತು ರೊಮೆನಿಯಾ ಗಡಿ ಭಾಗದಲ್ಲಿ ಸಿಲುಕಿರುವ ಜಮ್ಮು ಮತ್ತು ಕಾಶ್ಮೀರದ 30 ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿ ಇಂದು ಸುಪ್ರೀಂಕೋರ್ಟ್‍ನಲ್ಲಿ ಯುದ್ಧದ ಕುರಿತು ಚರ್ಚೆಯಾಗಿದೆ.
ಅರ್ಜಿ ಸಲ್ಲಿಸಿದ ವಕೀಲರು ರೊಮೆನಿಯಾ ಗಡಿಯಲ್ಲಿ ಮೈನಸ್ 7 ಡಿಗ್ರಿ ಸೆಲ್ಸಿಯಸ್ ಶೀತಾಂಶದಲ್ಲಿ ವಿದ್ಯಾರ್ಥಿಗಳು ದಿನ ಕಲೆಯುತ್ತಿದ್ದಾರೆ. ಕೂಡಲೇ ಅವರನ್ನು ಭಾರತಕ್ಕೆ ಸ್ಥಳಾಂತರಿಸಬೇಕೆಂದು ಮನವಿ ಮಾಡಿದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿಗಳನ್ನೊಳ ಗೊಂಡ ವಿಭಾಗೀಯ ಪೀಠ, ನಮಗೆ ವಿದ್ಯಾರ್ಥಿಗಳ ಮೇಲೆ ಅನುಕಂಪವಿದೆ. ತುಂಬಾ ನೋವಾಗಿದೆ. ಆದರೆ, ನಾವು ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷರಿಗೆ ಸೂಚಿಸಲು ಸಾಧ್ಯವೇ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಾವು ಆ ರೀತಿಯ ಯಾವುದೇ ಸೂಚನೆ ನೀಡಲು ಸಾಧ್ಯವಿಲ್ಲ. ನಿಮ್ಮ ಅರ್ಜಿಯ ಬಗ್ಗೆ ಕೇಂದ್ರ ಸರ್ಕಾರದ ಪರವಾಗಿ ವಾದಿಸುವ ಅಟಾಲಿ ಜನರಲ್ ಅವರ ಗಮನಕ್ಕೆ ತರುತ್ತೇವೆ. ಸ್ವಲ್ಪ ತಾಳ್ಮೆಯಿಂದ ಇರಿ. ಸರ್ಕಾರ ತನ್ನ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದ್ದು, ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಸ್ಥಳಾಂತರಿ ಸಲಾಗಿದೆ. ಈವರೆಗೂ 3ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆತರಲಾಗಿದೆ ಎಂದು
ತಿಳಿಸಿದೆ.
