ಕೆನಡಾ ಸಂಸತ್‍ನಲ್ಲಿ ಕನ್ನಡ ಡಿಂಡಿಮ, ಚಂದ್ರ ಆರ್ಯ ಮಾತೃಭಾಷಾ ಪ್ರೇಮಕ್ಕೆ ಕನ್ನಡಿಗರು ಫಿದಾ

Spread the love

ನವದೆಹಲಿ,ಮೇ 20-ಕನ್ನಡ ನಾಡಿನಲ್ಲೇ ಕನ್ನಡ ಮಾತಾಡಲು ಕೆಲವರು ಮುಜುಗರ ಪಡುತ್ತಾರೆ. ಆದರೆ, ದೂರದ ಕೆನಡಾ ಸಂಸತ್‍ನಲ್ಲಿ ಕಸ್ತೂರಿ ಕನ್ನಡದ ಕಂಪು ಹರಡಿದೆ. ಇಂತಹ ಮಾತೃಭಾಷಾ ಪ್ರೇಮ ಮರೆದವರು ಬೇರೆ ಯಾರು ಅಲ್ಲ ಕೆನಡಾ ಸಂಸದರಾಗಿ ಆಯ್ಕೆಯಾಗಿರುವ ಅಪ್ಪಟ ಕನ್ನಡಿಗ ಚಂದ್ರ ಆರ್ಯ.

ಸಂಸದರಾಗಿ ಆಯ್ಕೆಯಾದ ನಂತರ ಕೆನಡಾ ಸಂಸತ್‍ಗೆ ಆಗಮಿಸಿದ ಆರ್ಯ ಅವರು, ನಾನು ನನ್ನ ಮಾತೃಭಾಷೆಯಲ್ಲಿ ಮಾತು ಆರಂಭಿಸುತ್ತೇನೆ ಎಂದು ಅಪ್ಪಟ ಕನ್ನಡದಲ್ಲಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ. ಚಂದ್ರ ಆರ್ಯ ಅವರ ಈ ಕನ್ನಡ ಪ್ರೇಮಕ್ಕೆ ವಿಶ್ವದೆಲ್ಲೆಡೆ ಇರುವ ಕೊಟ್ಯಾನುಕೋಟಿ ಕನ್ನಡಿಗರು ಫಿದಾ ಆಗಿದ್ದಾರೆ. ಅವರು ಕೆನಡಾ ಸಂಸತ್‍ನಲ್ಲಿ ನಿರರ್ಗಳವಾಗಿ ಕನ್ನಡ ಮಾತನಾಡುವ ವಿಡಿಯೋ ವೈರಲ್ ಆಗಿದ್ದು ಭಾರೀ ಜನಮನ್ನಣೆಗೆ ಪಾತ್ರವಾಗಿದೆ.

ಕೆನಡಾ ಸಂಸತ್‍ನಲ್ಲಿ ಮಾತು ಆರಂಭಿಸುವ ಆರ್ಯ ಅವರು, ಮಾನ್ಯ ಸಭಾಪತಿಗಳೇ ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದವನಾದ ನಾನು ಕೆನಡಾ ಸಂಸದನಾಗಿ ಆಯ್ಕೆಯಾಗಿ ಇದೀಗ ಇಲ್ಲಿನ ಪಾರ್ಲಿಮೆಂಟ್‍ನಲ್ಲಿ ಕನ್ನಡದಲ್ಲಿ ನಾನು ಮಾತನಾಡುತ್ತಿರುವುದು ಐದು ಕೋಟಿ ಕನ್ನಡಿಗರ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ 2018ರಲ್ಲಿ ಕನ್ನಡಿಗರು ಕೆನಡಾ ಸಂಸತ್‍ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದರು. ಇದೀಗ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಭಾಷಣ ಮಾಡಿದ್ದೇನೆ.

ರಾಷ್ಟ್ರಕವಿ ಕುವೆಂಪು ಅವರ ವಿರಚಿತ ವರನಟ ಡಾ.ರಾಜ್‍ಕುಮಾರ್ ಅವರು ಹಾಡಿರುವ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಆಶಯದೊಂದಿಗೆ ನನ್ನ ಭಾಷಣ ಮುಗಿಸುತ್ತೇನೆ ಎನ್ನುತ್ತಿದ್ದಂತೆ ಉಳಿದ ಸಂಸದರು ಎದ್ದು ನಿಂತು ಮೆಚ್ಚುಗೆಯ ಚಪ್ಪಾಳೆ ತಟ್ಟಿರುವ ವಿಡಿಯೋ ತುಣುಕನ್ನು ಸ್ವತಃ ಚಂದ್ರ ಆರ್ಯ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಹಸ್ರಾರು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಅವರ ಈ ಮಾತೃ ಭಾಷಾ ಪ್ರೇಮ ಐದು ಕೋಟಿ ಕನ್ನಡಿಗರ ಹೃದಯ ಗೆದ್ದಿರುವುದೇ ಅಲ್ಲದೆ ಭಾರತದ ಹೊರಗೆ ವಿದೇಶಿ ಸಂಸತ್‍ನಲ್ಲಿ ಕನ್ನಡದ ಕಂಪು ಪಸರಿಸಿದ್ದು ಇತಿಹಾಸದಲ್ಲೇ ಇದೇ ಮೊದಲು ಎಂಬ ದಾಖಲೆ ಬರೆದಿದೆ.

ಕನ್ನಡ ನಾಡಿನಲ್ಲೇ ಕನ್ನಡ ಮಾತನಾಡಲು ಮುಜುಗರ ಪಡುವಂತಹ ಸನ್ನಿವೇಶ ನಿರ್ಮಾಣವಾಗಿರುವ ಇಂತಹ ದಿನಗಳಲ್ಲಿ ದೂರದ ಕೆನಡಾ ಸಂಸತ್‍ನಲ್ಲಿ ಕನ್ನಡದ ಕಂಪು ಹರಿಸಿರುವ ಹೆಮ್ಮೆಯ ಕನ್ನಡಿಗ ಚಂದ್ರ ಆರ್ಯ ಅವರು ಕನ್ನಡ ಎಂದರೆ ಮೂಗು ಮುರಿಯುವವರಿಗೆ ಮಾದರಿಯಾಗಲಿ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಆರೈಕೆಯಾಗಿದೆ.

Facebook Comments