ವಿಂಡ್ಸರ್ (ಅಮೆರಿಕಾ), ಫೆ.12- ಲಾರಿ ಚಾಲಕರು ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದ ಆದೇಶ ವಿರೋಧಿಸಿ ಕೆನಡಾ ಮತ್ತು ಅಮೆರಿಕಾ ನಡುವಿನ ಗಡಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ಟ್ರಕ್ ಚಾಲಕರು, ನ್ಯಾಯಾಲಯದ ಆದೇಶಕ್ಕೂ ಜಗ್ಗುತ್ತಿಲ್ಲ.
ಐತಿಹಾಸಿಕವೆಂದೆ ಪರಿಗಣಿಸಲಾಗುವ ಕೆನಡಾದ ಪ್ರಜೆಗಳ ಈ ಪ್ರತಿಭಟನೆ ಜಗತ್ತಿನ ಗಮನ ಸೆಳೆದಿದೆ. ಕಳೆದ ಸೋಮವಾರದಿಂದ ಕೆನಡಾದ ಟ್ರಕ್ ಚಾಲಕರು ಬಂಪರ್ ಟು ಬಂಪರ್ ಎಂಬ ಪ್ರತಿಭಟನೆ ನಡೆಸುತ್ತಿದ್ದಾರೆ. ವಾಹನಗಳ ಬಂಪರ್‍ಗಳು ಒಂದಕ್ಕೊಂದು ಅಂಟಿಕೊಂಡಂತೆ ನಿಂತಿರುವುದರಿಂದ ಬೇರೆ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲವಾಗಿದೆ. ಸಂಚಾರ ವ್ಯವಸ್ಥೆ ಸಂಪೂರ್ಣಸ ಸ್ಥಗಿತಗೊಂಡಿದೆ.
ಆಟೋ ಮೊಬೈಲ್ ಉದ್ಯಮ ಸಂಕಷ್ಟಕ್ಕಿಡಾಗಿದೆ, ಪ್ರತಿಷ್ಠಿತ ಕಂಪೆನಿಗಳ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿವೆ, ಇನ್ನೂ ಕೆಲವು ಕಂಪೆನಿಗಳು ಕೆಲಸದ ನಿರ್ವಹಣೆಯ ಪಾಳಿಯನ್ನು ಬದಲಾವಣೆ ಮಾಡಿದೆ. ಕೆನಡಾ-ಅಮೆರಿಕಾ ನಡುವಿನ ಸಂಪರ್ಕ ಕೊಂಡಿಯಾದ ಅಂಬಾಸಿಡರ್ ಬ್ರಿಡ್ಜ್‍ಗೆ ಸಂಪೂರ್ಣವಾಗಿ ವಾಹನಗಳು ಅಡ್ಡ ನಿಂತಿವೆ. ಇದರಿಂದ ಅಮೆರಿಕಾದ ವಿಂಡ್ಸರ್ ನಗರದಿಂದ ಕೆನಡಾದ ಡೆಟ್ರೋಯಿಟ್ ನಗರದ ನಡುವಿನ ಸಂಪರ್ಕ ಕಡಿತಗೊಂಡಿದೆ.
ಕೆನಡಾದ ಒಟಾವ ಪ್ರದೇಶ ಪಾಶ್ವವಾಯುವು ಪೀಡಿತವಾಗಿದೆ. ಎರಡು ದೇಶಗಳ ನಡುವೆ ಸಂಚಾರಕ್ಕೆ ಅವಕಾಶ ಇರುವ ಅಲ್ರ್ಬೆಟಾ ಮತ್ತು ಮನಿಟೋಬಾ ಗಡಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ. ರಸ್ತೆಗಳಿಗೆ ಬಾಟಲ್‍ಗಳನ್ನು ಅಡ್ಡಲಾಗಿ ಇಡಲಾಗಿದೆ. ಸಂಚಾರ ಸ್ಥಗಿತಗೊಂಡಿದ್ದರಿಂದ ವಿಂಡ್ಸರ್ ನಗರದ ವಾಣಿಜ್ಯ ಚಟುವಟಿಕೆಗಳು ಸಂಕಷ್ಟಕ್ಕೀಡಾಗಿವೆ.
ಪ್ರತಿಭಟನೆಗೆ ಕಳವಳ ವ್ಯಕ್ತ ಪಡಿಸಿರುವ ಅಮೆರಿಕಾ ಅಧ್ಯಕ್ಷ ಕೂಡಲೇ ಕ್ರಮ ಕೈಗೊಂಡು ವಾಹನಗಳನ್ನು ತೆರವು ಮಾಡುವಂತೆ ಕೆನಡಾ ಆಡಳಿತವನ್ನು ಕೇಳಿಕೊಂಡಿದ್ದಾರೆ. ಕೆನಾಡದ ಪ್ರಧಾನಿ ಜಸ್ಟಿನ್ ಟ್ರುಡೋ ನಿಯಮ ಬಾಹಿರವಾದ ಪ್ರತಿಭಟನೆಯನ್ನು ಕೈಬಿಡುವಂತೆ ತಮ್ಮ ದೇಶದ ಪ್ರಜೆಗಳಿಗೆ ಒತ್ತಾಯಿಸಿದ್ದು, ನಾವು ನಿಮ್ಮ ಬೇಡಿಕೆಯನ್ನು ಆಲಿಸುತ್ತೇವೆ. ಮೊದಲು ರಸ್ತೆಗೆ ಅಡ್ಡಲಾಗಿ ಹಾಕಿರುವ ವಾಹನಗಳನ್ನು ತೆರವು ಮಾಡಿ ಮನೆಗೆ ಮರಳಿ ಎಂದು ಮನವಿ ಮಾಡಿದ್ದಾರೆ. ಪ್ರಾಂತಿಯ ಆಡಳಿತಗಳು ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿವೆ.
ಈ ನಡುವೆ ನಿನ್ನೆ ಸುಮಾರು ನಾಲ್ಕುವರೆ ಗಂಟೆಗಳ ಕಾಲ ವಿಚಾರನೆ ನಡೆಸಿದ ಕೆನಡಾ ನ್ಯಾಯಾಲಯದ ನ್ಯಾಯಾಧೀಶರು ಪ್ರತಿಭಟನೆಯನ್ನು ತೆರವು ಮಾಡುವಂತೆ ಆದೇಶಿದ್ದಾರೆ. ಸ್ವಯಂ ಪ್ರೇರಿತವಾಗಿ ಪ್ರತಿಭಟನೆ ಕೈ ಬಿಡಲು ಸಂಜೆ 7 ಗಂಟೆಯವರೆಗೂ ಸಮಯಾವಕಾಶ ನೀಡಲಾಗಿದೆ. ಬಳಿಕವೂ ಮುಂದುವರೆದರೆ ವಾಹನಗಳನ್ನು ಜಪ್ತಿ ಮಾಡಬಹುದು, ಕಾನೂನು ಉಲ್ಲಂಘಿಸುವವರನ್ನು ಬಂಧಿಸಬಹುದು ಎಂದು ಆದೇಶಿಸಲಾಗಿದೆ.
ನ್ಯಾಯಾಲಯದ ಆದೇಶದಂತೆ ಪ್ರತಿಭಟನೆ ತೆರವು ಮಾಡಲು ಕಾರ್ಯಚರಣೆಯ ತಂಡವನ್ನು ಯಾವಾಗ ಕಳುಹಿಸಲಾಗುತ್ತದೆ ಎಂದು ಖಚಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಇದು ವಿಭಿನ್ನ ಪ್ರತಿಭಟನೆ ಎಂದು ಹೆಸರಾಗಿದೆ. ಭಾರತದಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳ ರೈತರು ರಾಷ್ಟ್ರ ರಾಜಧಾನಿ ದೆಹಲಿಗೆ ತಮ್ಮ ಟ್ರ್ಯಾಕ್ಟರ್‍ಗಳಲ್ಲಿ ಮುತ್ತಿಗೆ ಹಾಕಿ ವರ್ಷಕ್ಕೂ ಹೆಚ್ಚು ಕಾಲ ದಿಗ್ಭಂದನ ವಿಧಿಸಿದ್ದರು. ಸರ್ಕಾರ, ಕೋರ್ಟ್ ಎಚ್ಚರಿಕೆಗಳಿಗೂ ರೈತರು ಮಣಿದಿರಲಿಲ್ಲ. ಕೊನೆಗೆ ಪ್ರಧಾನಿ ಅವರೇ ಹಿಂದೆ ಸರಿದು ವಿವಾದಿತ ಕಾನೂನುಗಳನ್ನು ಹಿಂಪಡೆದರು.
ಈಗ ಅದೇ ಮಾದರಿಯಲ್ಲಿ ಕೆನಡಾದಲ್ಲೂ ಬಲಪಂಥೀಯ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆರಂಭದಲ್ಲಿ ಕೊರೊನಾ ನಿರ್ವಹಣೆಯಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಹದಿನೈದು ದಿನಗಳ ಹಿಂದೆ ಪ್ರತಿಭಟನೆಗಳು ಶುರುವಾದವು. ಹಂತ ಹಂತವಾಗಿ ಅವರು ವಿಪರೀತಕ್ಕೆ ಹೋಗಿದ್ದು, ಅಂತರಾಷ್ಟ್ರೀಯ ಗಡಿಗೆ ದಿಗ್ಭಂದನ ವಿಧಿಸುವ ಮಟ್ಟಕ್ಕೆ ಬೆಳೆದಿದೆ. ನ್ಯಾಯಾಲಯದ ಆದೇಶ ನಮ್ಮ ದುಡಿಮೆಯ ಹಕ್ಕನ್ನು ಧಮನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
