ತುಮಕೂರು, ಜು.12- ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಕೆನಡಾ ದೇಶದ ಸಂಸತ್ ಸದಸ್ಯ, ಕನ್ನಡಿಗ ಚಂದ್ರಕಾಂತ್ ಆರ್ಯ ಅಭಿಪ್ರಾಯಪಟ್ಟಿದ್ದಾರೆ.
ಕೆನಡಾ ದೇಶದಲ್ಲಿ ಸಂಸತ್ ಸದಸ್ಯರಾಗಿರುವ ಜಿಲ್ಲಾಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದವರಾದ ಚಂದ್ರಕಾಂತ ಆರ್ಯ ಅವರು ನಗರದ ರವೀಂದ್ರ ಕಲಾನಿಕೇತನದಲ್ಲಿ ಸಂವಾದ ನಡೆಸಿದರು. ಹಾಲಪ್ಪ ಪ್ರತಿಷ್ಠಾನ, ಮಾತೃಛಾಯ ಸಂಸ್ಥೆ, ಲಯನ್ಸ್, ರೋಟರಿ, ಛೇಂಬರ್ಸ್ ಆಫ್ ಕಾಮರ್ಸ್, ಆದರ್ಶ ಫೌಂಡೇಷನ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಭಾರತ ಬಹಳಷ್ಟು ಅಭಿವೃದ್ಧಿ ಹೊಂದಿದೆ.
ಬಿಎಚ್‍ಇಎಲ್, ಹೆಚ್‍ಎಎಲ್ ಹಿಂದೂಸ್ತಾನ್ ಮಿಷನ್ ಟೂಲ್ಸ್, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕೈಗಾರಿಕೆಗಳ ಸ್ಥಾಪನೆಯಿಂದ ಅನೇಕರಿಗೆ ಉದ್ಯೋಗಗಳು ಲಭಿಸಿದವು. ಹೀಗೆ ವಿವಿಧ ರೀತಿಯಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಾ ಮುಂದೆ ಸಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ತುಮಕೂರಿಗೆ ಹೆಚ್‍ಎಎಲ್ ಹೆಲಿಕಾಪ್ಟರ್ ಘಟಕ ಬಂದಿದೆ. ಇನ್ನೆರಡು ತಿಂಗಳಲ್ಲಿ ಹೆಲಿಕಾಪ್ಟರ್ ಹಾರಲಿದೆ. ಸುಮಾರು 18 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ನಿರ್ಮಾಣವಾಗಲಿದೆ. ತುಮಕೂರಿನಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿ ಸುಮಾರು 5 ಲಕ್ಷ ವಿದ್ಯಾರ್ಥಿಗಳು ವಿವಿಧ ಕೋರ್ಸ್‍ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದನ್ನು ನೋಡಿದರೆ ತುಮಕೂರು ಶಿಕ್ಷಣ ಕೇಂದ್ರ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ಆಸ್ಟ್ರೇಲಿಯಾ ಪಾರ್ಲಿಮೆಂಟ್ ಸದಸ್ಯನಾಗುತ್ತಿದ್ದೆ: ನಾನು ತುಮಕೂರಿಗೆ ಬಾರದೆ ಆಸ್ಟ್ರೇಲಿಯದಲ್ಲಿದ್ದಿದ್ದರೆ ಅಲ್ಲಿನ ಪಾರ್ಲಿಮೆಂಟ್ ಸದಸ್ಯನಾಗುತ್ತಿದ್ದಾ ಅನ್ನಿಸುತ್ತಿದೆ ಎಂದು ಪರಮೇಶ್ವರ್ ಸ್ಮರಿಸಿಕೊಂಡರು. ಕೆನಡಾ ಸಂಸದ ಚಂದ್ರ ಆರ್ಯ ಅವರು ಕೆನಡಾ ಸಂಸತ್‍ನಲ್ಲಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ನಮ್ಮ ಜಿಲ್ಲಾಯವರಾದ ಅವರು ಕೆನಡಾ ಸಂಸತ್‍ನಲ್ಲಿ ಕನ್ನಡ ಮಾತನಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡತ್ವ ಸಾರಿದ್ದಾರೆ ಎಂದರು.
ತುಮಕೂರು ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಭಿನ್ನಮತವಿಲ್ಲ ಎಂದ ಅವರು, ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿ, ಅತಿ ಹೆಚ್ಚು ಸ್ಥಾನವನ್ನು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ತುಮಕೂರು ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿಗೆ ಸಮೀಪ ಜಿಲ್ಲಾಯಾಗಿದ್ದು, ಅನೇಕ ಕೈಗಾರಿಕೆಗಳು ಬಂದಿವೆ. ಅಲ್ಲದೆ, 18 ಸಾವಿರ ಎಕರೆ ಭೂ ಪ್ರದೇಶದಲ್ಲಿ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಈ ನಿಟ್ಟಿನಲ್ಲಿ ನಿಮ್ಮ ಸಲಹೆ ಮತ್ತು ಸಹಕಾರ ಕೊಟ್ಟರೆ ಜಿಲ್ಲಾ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ತಿಳಿಸಿದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಬಾಪೂಜಿ ವಿದ್ಯಾಸಂಸ್ಥೆಯ ಎಂ.ಬಸವಯ್ಯ, ಆಡಿಟರ್ ಆಂಜಿನಪ್ಪ, ಸಾಗರನಹಳ್ಳಿ ಪ್ರಭು, ಪ್ರೊ.ಕೆ.ಚಂದ್ರಣ್ಣ, ಆರ್.ಕಾಮರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.