ಕಾರು ಪಲ್ಟಿ: ನಂದಿ ಬೆಟ್ಟಕ್ಕೆ ತೆರಳುತ್ತಿದ್ದ ನಾಲ್ವರು ದುರ್ಮರಣ, ಐವರು ಗಂಭೀರ

ಚಿಕ್ಕಬಳ್ಳಾಪುರ, ಆ.24- ಸ್ನೇಹಿತನ ಹುಟ್ಟುಹಬ್ಬವನ್ನು ಮುಗಿಸಿ ಬೆಳಗಿನ ಜಾವ ಒಂಬತ್ತು ಮಂದಿ ಸ್ನೇಹಿತರು ನಂದಿಬೆಟ್ಟಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೃತರೆಲ್ಲರೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ನಕ್ಕಲಪಲ್ಲಿ ಗ್ರಾಮದ ರಮೇಶ್ (30), ಮಂಜುನಾಥ (26), ಅಶೋಕ ರೆಡ್ಡಿ (26) ಮತ್ತು ಗೌರೀಶ್ (23) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಐದು ಮಂದಿಯನ್ನು ಹೊಸಕೋಟೆ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉದ್ಯೋಗ ಅರಸಿಕೊಂಡು ನಕ್ಕಲಪಲ್ಲಿ ಗ್ರಾಮದ ಒಂಬತ್ತು ಮಂದಿ ಸ್ನೇಹಿತರು ಬೆಂಗಳೂರಿಗೆ ಬಂದು ಆವಲಹಳ್ಳಿಯ ಬಳಿಯಿರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಒಂದೇ ರೂಮಿನಲ್ಲಿ ವಾಸಿಸುತ್ತಿದ್ದರು.

ನಿನ್ನೆ ಮಧ್ಯರಾತ್ರಿ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇಂದು ಮತ್ತು ನಾಳೆ ಕಾರ್ಖಾನೆಗೆ ರಜೆಯಿದ್ದ ಕಾರಣ ಒಟ್ಟಾಗಿ ನಂದಿಬೆಟ್ಟಕ್ಕೆ ಹೋಗಲು ತೀರ್ಮಾನಿಸಿ ಅದರಂತೆ ಮುಂಜಾನೆ ಎಲ್ಲರೂ ಒಟ್ಟಾಗಿ ಮಹೀಂದ್ರಾ ಕ್ಸೈಲೋ ಕಾರಿನಲ್ಲಿ ತೆರಳಿದ್ದಾರೆ.

ಮುಂಜಾನೆ ಸುಮಾರು 3.30ರಲ್ಲಿ ಕಾರು ಹಂದರಹಳ್ಳಿ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮವಾಗಿ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದ ಚನ್ನರಾಯಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಮೃತ ನಾಲ್ವರ ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.