ಬೆಂಗಳೂರು ಏರ್ ಪೋರ್ಟ್ ರಸ್ತೆಯಲ್ಲಿ ಅಪಘಾತ, ಓರ್ವ ಸಾವು

ಬೆಂಗಳೂರು, ಮಾ.2-ಯಲಹಂಕ ಕಡೆಯಿಂದ ಏರ್ ಪೋರ್ಟ್ ಕಡೆಗೆ ಹೋಗುತ್ತಿದ್ದ ಹೋಂಡಾ ಸಿಟಿ ಕಾರೊಂದು ಅತಿ ವೇಗದಿಂದ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಸಂಭವಿಸಿದೆ.

ಹೋಂಡಾ ಸಿಟಿ ಕಾರಿನಲ್ಲಿದ್ದ ಕಿಶೋರ್ (23)ಮೃತಪಟ್ಟ ದುರ್ದೈವಿ. ಹೆಬ್ಬಾಳದಿಂದ ಹೋಂಡಾ ಸಿಟಿ ಕಾರನ್ನು ನಿರಂಜನ್ ಎಂಬುವರು ಚಲಾಯಿಸಿಕೊಂಡು ಯಲಹಂಕ ಮಾರ್ಗವಾಗಿ ಏರ್ ಪೋರ್ಟ್ ಕಡೆಗೆ ರಾತ್ರಿ 8.30ರ ಸುಮಾರಿನಲ್ಲಿ ಬರುತ್ತಿದ್ದರು.

ಕಾರು ಅತಿ ವೇಗದಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ವೆಂಕಟಾಲ ಮೇಲ್ಸೇತುವೆ ಮೇಲೆ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಗೆ ನುಗ್ಗಿ ಏರ್ ಪೋರ್ಟ್ ಕಡೆಯಿಂದ ಬೆಂಗಳೂರು ಸಿಟಿ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ನಂತರ ಅದರ ಹಿಂದೆ ಬರುತ್ತಿದ್ದ ಹೋಂಡಾ ಜಾಗ್ ಕಾರಿಗೆ ಅಪ್ಪಳಿಸಿದೆ. ಪರಿಣಾಮ ಹೋಂಡಾ ಸಿಟಿ ಕಾರಿನಲ್ಲಿದ್ದ ಕಿಶೋರ್ ಹಾಗೂ ಮತ್ತಿಬ್ಬರು, ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರು, ಹೋಂಡಾ ಜಾಗ್ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡರು.

ತಕ್ಷಣ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳ ಪೈಕಿ ಕಿಶೋರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಮೂರೂ ಕಾರುಗಳು ಜಖಂಗೊಂಡಿವೆ. ಸುದ್ದಿ ತಿಳಿದು ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sri Raghav

Admin