ಬಾಡಿಗೆಗೆ ಪಡೆದಿದ್ದ ಕಾರು ಅಪಘಾತ, ರಿಪೇರಿ ವೆಚ್ಚ ಭರಿಸದ ನಟನ ವಿರುದ್ಧ ಅರ್ಜಿ

ಬೆಂಗಳೂರು, ಮಾ.18- ಕಿರುತೆರೆ ಧಾರಾವಾಹಿ ಜೊತೆ ಜೊತೆಯಲಿ ಚಿತ್ರೀಕರಣಕ್ಕೆ ಬಾಡಿಗೆಗೆ ಪಡೆದಿದ್ದ ಕಾರನ್ನು ನಟ ಅನಿರುದ್ಧ್ ಅವರು ಅಪಘಾತ ಮಾಡಿದ್ದು, ಕಾರಿನ ರಿಪೇರಿ ವೆಚ್ಚ ಭರಿಸದ ಬಗ್ಗೆ ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ಕಾರಿನ ಮಾಲೀಕ ಅರ್ಜಿ ನೀಡಿದ್ದಾರೆ. ಅನಿರುದ್ಧ್ ಅವರ ಪಿಎ ನಾಗರಾಜು ಅವರಿಗೆ ಕಾರಿನ ರಿಪೇರಿ ವೆಚ್ಚ ನೀಡುವ ಬಗ್ಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಲಗ್ಗೆರೆ ನಿವಾಸಿ, ಕಾರು ಮಾಲೀಕರಾದ ಯತೀಶ್ ಕಿರಣ ಅವರು ಪೊಲೀಸರಿಗೆ ನೀಡಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

ಟ್ರಾವೆಲ್ ಏಜೆನ್ಸಿ ನಡೆಸುವ ಯತೀಶ್ ಕಿರಣ ಎಂಬುವವರಿಗೆ ಧಾರಾವಾಹಿ ಮ್ಯಾನೇಜರ್ ಪಾರ್ಥ ಮತ್ತು ಪ್ರಡ್ಯೂಸರ್ ಜಗದೀಶ್ ಅವರು ದೂರವಾಣಿ ಕರೆ ಮಾಡಿ ಜೊತೆ ಜೊತೆಯಲಿ ಧಾರಾವಾಹಿ ಶೂಟಿಂಗ್‍ಗಾಗಿ ಕಾರು ಬಾಡಿಗೆಗೆ ಬೇಕೆಂದು ತಿಳಿಸಿದ್ದಾರೆ. ಅದರಂತೆ ಮಾ.10ರಂದು ಯತೀಶ್ ಅವರು ತಮ್ಮ ತಂದೆಯ ಬೆಂಜ್ ಕಾರನ್ನು ತೆಗೆದುಕೊಂಡು ಶೂಟಿಂಗ್ ಸ್ಥಳವಾದ ರಾಜರಾಜೇಶ್ವರಿ ನಗರಕ್ಕೆ ಹೋಗಿದ್ದಾರೆ.

ಆ ಸಂದರ್ಭದಲ್ಲಿ ಒಂದು ರೌಂಡ್ ಹೋಗಿ ಬರುತ್ತೇವೆ ಎಂದು ಕೇಳಿದಾಗ, ನಾನೇ ಓಡಿಸುತ್ತೇನೆ ಎಂದು ಹೇಳಿದರೂ ಕೇಳದೆ ನಾವೇ ಓಡಿಸುತ್ತೇವೆಂದು ಕಾರನ್ನು ತೆಗೆದುಕೊಂಡು ಹೋದರು. ಕಾರಿನಲ್ಲಿ ಡೈರೆಕ್ಟರ್ ಲಕ್ಕೇಗೌಡರು, ಕ್ಯಾಮರಾಮನ್ ಕುಳಿತುಕೊಂಡಿದ್ದರು. ಅನಿರುದ್ಧ್ ಅವರು ಕಾರನ್ನು ಚಲಾಯಿಸಿಕೊಂಡು ಹೋಗಿ ಎಲ್ಲಿಯೋ ಸ್ವಿಫ್ಟ್ ಕಾರಿಗೆ ಗುದ್ದಿಸಿ ಜಖಂಗೊಳಿಸಿದ್ದಾರೆ. ನಂತರ ಕಾರನ್ನು ತೆಗೆದುಕೊಂಡು ಬಂದು, ಗುದ್ದಿಬಿಟ್ಟೆ ಸಾರಿ, ಕಾರನ್ನು ರಿಪೇರಿ ಮಾಡಿಸಿಕೊಡುವೆನೆಂದು ಹೇಳಿದ್ದರು. ಆದರೆ, ರಿಪೇರಿ ವೆಚ್ಚ ನೀಡಿಲ್ಲ.

ಪ್ರೊಡೆಕ್ಷನ್ ಮ್ಯಾನೇಜರ್ ಪಾರ್ಥ ಹಾಗೂ ಜಗದೀಶ್ ಅವರು ಕಾರನ್ನು ರಿಪೇರಿಗೆ ಶೋ ರೂಂಗೆ ಬಿಡಿ, ಎಷ್ಟೇ ಖರ್ಚಾದರೂ ಕೊಡುತ್ತೇವೆ ಎಂದು ಹೇಳಿದರು. ಅವರ ಮಾತು ನಂಬಿ ಕಾರನ್ನು ರಿಪೇರಿಗೆ ಬಿಟ್ಟು ಶೋ ರೂಂನವರು ನೀಡಿದ್ದ 5 ಲಕ್ಷದ 23 ಸಾವಿರ ರೂ. ರೂ. ಬಿಲ್‍ಅನ್ನು ಅವರ ಮೊಬೈಲ್‍ಗೆ ಕಳುಹಿಸಿದ್ದೆ. ಆ ಸಂದರ್ಭದಲ್ಲಿ ಶಿವಾಜಿನಗರದಲ್ಲಿ ರಿಪೇರಿ ಮಾಡಿಸಿಕೊಡುತ್ತೇವೆ ಎಂದು ಹೇಳಿದರು. ನಾನು ಶೋ ರೂಂನಲ್ಲಿ ಮಾಡಿಸಿಕೊಡುವಂತೆ ಹೇಳಿದೆ. ಆದರೆ ಇದುವರೆಗೂ ಒಂದು ಫೋನ್ ಸಹ ಮಾಡಿಲ್ಲ, ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿಲ್ಲ.

ಐದು ದಿನವಾದರೂ ಫೋನ್ ಮಾಡಿಲ್ಲ. ಆ ಸಂದರ್ಭದಲ್ಲಿ ಧಾರಾವಾಹಿ ಪ್ರಡ್ಯೂಸರ್, ಮ್ಯಾನೇಜರ್‍ಗೂ ಫೋನ್ ಮಾಡಿದಾಗ ನಾನು ಗುದ್ದಿಲ್ಲ, ಕಾರು ಗುದ್ದಿದವರನ್ನು ಕೇಳಿ ಎಂದರು. ಅನಿರುದ್ಧ್ ಅವರಿಗೆ ನಾನು ಫೋನ್ ಮಾಡಿದಾಗ ಅವರು ಪಿಎ ನಾಗರಾಜು ಅವರ ಕೈಗೆ ಫೋನ್ ಕೊಟ್ಟರು. ನಾಗರಾಜ್ ಅವರು ನನ್ನ ಜತೆ ಫೋನ್‍ನಲ್ಲಿ ಮಾತನಾಡುತ್ತ ಅವಾಚ್ಯ ಶಬ್ದಗಳಿಂದ ಬೈದರು. ಆದ್ದರಿಂದ ಪಿಎ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕಾರಿನ ರಿಪೇರಿ ಖರ್ಚನ್ನು ಅವರಿಂದ ಭರಿಸಿಕೊಡುವಂತೆ ಪೊಲೀಸರಿಗೆ ನೀಡಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.