ಬೆಂಗಳೂರು, ಮೇ.16– ಭಜರಂಗಿ ಖ್ಯಾತಿಯ ನಟಿ, ನೃತ್ಯಗಾರ್ತಿ ರುಕ್ಮಿಣಿ ವಿಜಯ್‌ಕುಮಾರ್ ಅವರು ಕಾರು ಡಿಕ್ಕಿಯನ್ನು ಲಾಕ್ ಮಾಡದೆ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ಪರಿಸ್ಥಿತಿಯ ಲಾಭ ಪಡೆದುಕೊಂಡು ಆ ಕಾರಿನ ಬಳಿ ಹೋಗಿ ಬಾಗಿಲು ತೆಗೆದು ವಜ್ರದ ಆಭರಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಕಳ್ಳತನ ಮಾಡಿ ಪರಾರಿಯಾಗಿದ್ದ ಬಾಡಿಗೆ ಕಾರ್ ಚಾಲಕನನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿ 22.50 ಲಕ್ಷ ರೂ. ಮೌಲ್ಯದ ವಜ್ರದ ಆಭರಣಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ನಿವಾಸಿ ರಾಜ್ ಮಹಮ್ಮದ್ ಮಸ್ತಾನ್ (45) ಬಂಧಿತ ಬಾಡಿಗೆ ಕಾರು ಚಾಲಕ. ಮೇ 11ರಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಕೋರಮಂಗಲದ ನಿವಾಸಿ, ನೃತ್ಯಗಾರ್ತಿ ಕಾರು ಚಾಲನೆ ಮಾಡಿಕೊಂಡು ಕಬ್ಬನ್ ಪಾರ್ಕ್‌ನಲ್ಲಿ ವಾಯುವಿಹಾರ ಮಾಡಲು ಬಂದಿದ್ದು, ಕಾರನ್ನು ಕ್ಲೀನ್ಸ್ ರಸ್ತೆಯ ಬಸ್ ನಿಲ್ದಾಣದ ಹತ್ತಿರ ಪಾರ್ಕ್ ಮಾಡಿ ಕಾರು ಡಿಕ್ಕಿಯಲ್ಲಿ ಬ್ಯಾಗ್ ಇಟ್ಟು ಲಾಕ್ ಮಾಡದೆ ಮರೆತು ಹೋಗಿದ್ದಾರೆ.
ಅದೇ ಸ್ಥಳದಲ್ಲಿ ಬಾಡಿಗೆಗಾಗಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ಕಾರು ಚಾಲಕ ಇದನ್ನು ಗಮನಿಸಿ ಅವರು ಕಬ್ಬನ್ಪಾರ್ಕನೊಳಗೆ ಹೋಗುತ್ತಿದ್ದಂತೆ ಅವರ ಕಾರಿನ ಬಳಿ ಹೋಗಿ ಬಾಗಿಲು ತೆಗೆದು ಡಿಕ್ಕಿಯಲ್ಲಿಟ್ಟಿದ್ದ 14ಲಕ್ಷ ಮೌಲ್ಯದ 2 ವಜ್ರದ ಉಂಗುರಗಳು, 9 ಲಕ್ಷ ಬೆಲೆಯ ವಾಚ್, 75 ಸಾವಿರ ಬೆಲೆಯ ವಾಲೆಂಟ್, 20 ಸಾವಿರ ಬೆಲೆಯ ಏರ್ ಪ್ಯಾಡ್ ವಸ್ತುಗಳಿದ್ದ ಬ್ಯಾಗ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ನೃತ್ಯಗಾರ್ತಿ ವಾಯುವಿಹಾರ ಮುಗಿಸಿಕೊಂಡು ಕಾರಿನ ಬಳಿ ಬಂದಾಗ ಕಾರಿನ ಡಿಕ್ಕಿ ಏಕಾಏಕಿ ತೆರೆದುಕೊಂಡಿರುವುದು ಗಮನಿಸಿ ಗಾಬರಿಯಾಗಿ ಡಿಕ್ಕಿಯಲ್ಲಿಟ್ಟಿದ್ದ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ನೋಡಿದಾಗ ಇರಲಿಲ್ಲ. ಕಳ್ಳತನವಾಗಿದೆಯೆಂದು ತಿಳಿದು ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಾರು ಚಾಲಕನನ್ನು ಮಹಾಲಕ್ಷ್ಮಿ ಲೇಔಟ್ ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಹೇಳಿದ್ದಾನೆ.
ಆಭರಣ ಹಾಗೂ ಇನ್ನಿತರ ವಸ್ತುಗಳಿದ್ದ ಬ್ಯಾಗನ್ನು ತನ್ನ ಮನೆಯಲ್ಲೇ ಇಟ್ಟುಕೊಂಡಿರುವುದಾಗಿ ಆರೋಪಿ ತಿಳಿಸಿದ ಮೇರೆಗೆ ಪೊಲೀಸರು ಆತನ ಮನೆಯಿಂದ ಬ್ಯಾಗನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್ ಗಿರೀಶ್ ಹಾಗೂ ಸಿಬ್ಬಂದಿ ತಂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗೃತಿ ವಹಿಸಿ – ಯಾವುದೇ ಸಂದರ್ಭದಲ್ಲಿ ಬೆಲೆಬಾಳುವ ವಸ್ತುಗಳನ್ನು ಕಾರಿನಲ್ಲಿ ಇಟ್ಟುಕೊಂಡರೆ ವಾಹನಗಳನ್ನು ಲಾಕ್ ಮಾಡಲಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು, ಸಿಸಿ ಕ್ಯಾಮೆರಾ ಇರುವ ಕಡೆ ವಾಹನಗಳನ್ನು ನಿಲ್ಲಿಸಬೇಕು. ವಾಹನಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಇಟ್ಟರೆ ಹೊರಗೆ ಕಾಣದ ಹಾಗೆ ಇಡಬೇಕೆಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.