ಬೆಂಗಳೂರು,ಫೆ.17- ಮದ್ಯಪಾನ ಮಾಡಿ ಸ್ವಯಂ ಅಪಘಾತವೆಸಗಿ ಇಬ್ಬರ ಸಾವಿಗೆ ಕಾರಣನಾದ ಕಾರು ಚಾಲಕನಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರು ವರ್ಷ ಆರು ತಿಂಗಳ ಸಾಧಾರಣ ಸಜೆ ಮತ್ತು 1.4 ಲಕ್ಷ ರೂ. ದಂಡ ವಿಧಿಸಿದೆ.ಕಾರು ಚಾಲಕ ಬಾನುಕುಮಾರ್ ಎಂಬಾತನೇ ವಿಶ್ವನಾಥ್ (22) ಮತ್ತು ಸಂತೋಷ್ (20) ಸಾವಿಗೆ ಕಾರಣನಾಗಿ ಶಿಕ್ಷಗೆ ಒಳಗಾದವನು.
ಘಟನೆ ವಿವರ: 2013 ಮಾರ್ಚ್ 4ರಂದು ಬಾನುಕುಮಾರ್ ಸ್ನೇಹಿತರಾದ ವಿಶ್ವನಾಥ್, ಸಂತೋಷ್, ನಿಖಿಲ್‍ಕುಮಾರ್ ಮತ್ತು ಮಣಿಕಂಠ ಎಂಬುವರನ್ನು ತನ್ನ ಇನೋವಾ ಕಾರಿನಲ್ಲಿ ಕೂರಿಸಿಕೊಂಡು ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್‍ಸಿಟಿ ಕಡೆಯಿಂದ ಬನ್ನೇರುಘಟ್ಟ ರಸ್ತೆ ಕಡೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದನು.
ವಿಟ್ಟಸಂದ್ರ ಫ್ಲೈಓವರ್ ಹತ್ತಿರ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಎದುರು ರಸ್ತೆಗೆ ಹೋಗಿ ಮಗುಚಿ ಬಿದ್ದಿದ್ದರಿಂದ ಕಾರು ಸಂಪೂರ್ಣ ಜಖಂ ಆಗಿ ಕಾರಿನಲ್ಲಿದ್ದ ವಿಶ್ವನಾಥ್, ಸಂತೋಷ್ ಮೃತಪಟ್ಟಿರುತ್ತಾರೆ. ನಿಖಿಲ್‍ಕುಮಾರ್ ಮತ್ತು ಮಣಿಕಂಠ ಗಾಯಗೊಂಡಿದ್ದರು. ಈ ಸಂಬಂಧ ಎಲೆಕ್ಟ್ರಾನಿಕ್‍ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿ ಇನ್ಸ್‍ಪೆಕ್ಟರ್ ಶೇಖರ್ ಅವರು ತನಿಖೆ ಪೂರ್ಣಗೊಳಿಸಿ ಕಾರು ಚಾಲಕ ಬಾನುಕುಮಾರ್ ಅಂದು ಮದ್ಯ ಸೇವಿಸಿ ಕಾರು ಚಾಲನೆ ಮಾಡಿರುವುದು ಗೊತ್ತಾಗಿದೆ. ಆರೋಪಿ ವಿರುದ್ಧ ದೋಷಾರೋಪಣಪಟ್ಟಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಘನ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ್ದು, ವಿಚಾರಣಾ ಕಾಲದಲ್ಲಿ ಆರೋಪಿ ವಿರುದ್ಧ ಆರೋಪಗಳು ಸಾಬೀತಾದ್ದರಿಂದ ನ್ಯಾಯಾಲಯವು ಶಿಕ್ಷಯ ಪ್ರಮಾಣವನ್ನು ಪ್ರಕಟಿಸಿದೆ.
