ನಡುರಸ್ತೆಯಲ್ಲೇ ಹೊತ್ತಿಉರಿದ ಕಾರು, ಮಹಿಳೆ ಸಜೀವ ದಹನ..!

ಬೀದರ್, ಡಿ.5- ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ಮಹಿಳೆ ಸಜೀವವಾಗಿ ದಹನಗೊಂಡಿರುವ ಧಾರುಣ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-9ರಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಲ್ಯಾಣಿ(39) ಸಜೀವವಾಗಿ ದಹನಗೊಂಡ ದುರ್ದೈವಿ. ಮಹಾರಾಷ್ಟ್ರದ ಲಾತೂರ್‍ನಿಂದ ಹೈದರಾಬಾದ್‍ಗೆ ಒಂದೇ ಕುಟುಂಬದ ನಾಲ್ವರು ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದೆ.

ಹಿಂಬದಿಯಲ್ಲಿ ಕುಳಿತಿದ್ದ ಪತಿ, ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದಾರೆ. ಡ್ರೈವಿಂಗ್ ಮಾಡುತ್ತಿದ್ದ ಕಲ್ಯಾಣಿ ಹೊರಬರಲಾರದೆ ಕುಟುಂಬದವರ ಕಣ್ಣೆದುರೆ ಸಜೀವವಾಗಿ ದಹನವಾಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮನ್ನಾಖೇಳಿ ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Sri Raghav

Admin