ಕೇರ್ ಟೇಕರ್ ಕೆಲಸಕ್ಕೆ ಸೇರಿ ಕಳ್ಳತನ, ಮಹಿಳೆ ಬಂಧನ

Social Share

ಬೆಂಗಳೂರು, ಸೆ.27- ಕೇರ್ ಟೇಕರ್ ಕೆಲಸಕ್ಕೆಂದು ನೇಮಕಗೊಂಡು ಮನೆಯಲ್ಲಿದ್ದ ಹಣ, ಆಭರಣಗಳೊಂದಿಗೆ ಪರಾರಿಯಾಗಿದ್ದ ದಾವಣಗೆರೆ ಮೂಲದ ಮಹಿಳೆಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ನಗದೂ ಸೇರಿದಂತೆ 15 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು ಗುಳ್ಳೆಹಳ್ಳಿ ಗ್ರಾಮದ ಉಮಾದೇವಿ(43) ಬಂಧಿತ ಮಹಿಳೆ.

ಅಪರ್ಣ ಎಂಬುವರ ಮನೆಯಲ್ಲಿ ಅವರ ತಂದೆ ಗಂಗಣ್ಣ ಎಂಬುವರನ್ನು ನೋಡಿಕೊಳ್ಳಲು ಕೇರ್ ಟೇಕರ್ ಕೆಲಸಕ್ಕೆ ಉಮಾದೇವಿಯನ್ನು ನೇಮಕ ಮಾಡಿಕೊಂಡಿದ್ದರು. ಸೆ.21ರಂದು ಉಮಾದೇವಿ ಮನೆಯಲ್ಲಿದ್ದ ನಗದು, ಚಿನ್ನದ ಒಡವೆಗಳನ್ನು ಹಾಗೂ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದಳು.

ಈ ಬಗ್ಗೆ ಅಪರ್ಣ ಅವರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡ ಪೊಲೀಸರು ಆರೋಪಿತೆ ಬಗ್ಗೆ ಮಾಹಿತಿ ಕಲೆ ಹಾಕಿ ಆಕೆಯನ್ನು ಪತ್ತೆಹಚ್ಚಿ ಬಂಧಿಸಿ 5 ಲಕ್ಷ ರೂ.ನಗದು, 230 ಗ್ರಾಂ ಚಿನ್ನದ ಒಡವೆಗಳು, 750 ಗ್ರಾಂ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲಕ್ಷ್ಮಣ್ ಬಿ ನಿಂಬರಗಿ, ಕೆಂಗೇರಿಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕೋದಂಡರಾಮ್ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ರಾಮಮೂರ್ತಿ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿತೆಯನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article