ಬೆಂಗಳೂರು : ಮಾರಕಾಸ್ತ್ರಗಳಿಂದ ಕೊಚ್ಚಿ ಕಾರ್ಪೆಂಟರ್ ಕೊಲೆ

Social Share

ಬೆಂಗಳೂರು,ಫೆ.23- ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಾರ್ಪೆಂಟರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಮಂಗಮ್ಮನಹಳ್ಳಿಯ ವೀರಭದ್ರೇಶ್ವರ ಲೇಔಟ್‍ನ 2ನೇ ಕ್ರಾಸ್ ನಿವಾಸಿ ದಿನೇಶ್‍ಕುಮಾರ್ (46) ಕೊಲೆಯಾದ ಕಾರ್ಪೆಂಟರ್.

ಕಳೆದ ಐದಾರು ವರ್ಷಗಳಿಂದ ವೀರಭದ್ರೇಶ್ವರ ಲೇಔಟ್‍ನಲ್ಲಿ ಬಾಡಿಗೆ ಮನೆಯಲ್ಲಿ ದಿನೇಶ್‍ಕುಮಾರ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಕಾರ್ಪೆಂಟರ್ ವೃತ್ತಿ ಹಾಗೂ ಮನೆ ತೋರಿಸುವ ಬ್ರೋಕರ್ ಕೆಲಸ ಮಾಡಿಕೊಂಡಿದ್ದರು. ದಿನೇಶ್‍ಕುಮಾರ್ ಅವರ ಪತ್ನಿ ಲಕ್ಷ್ಮೀ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದಾರೆ.

ನಿನ್ನೆ ರಾತ್ರಿ 8.20ರ ಸುಮಾರಿನಲ್ಲಿ ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ಮನೆ ಬಳಿ ಬಂದು ಆರನ್ ಮಾಡಿದ್ದಾರೆ. ಆರನ್ ಶಬ್ಧ ಕೇಳಿ ಮಗಳು ಕೆಳಗೆ ಹೋಗಿ ತರಕಾರಿ ಬ್ಯಾಗ್ ತೆಗೆದುಕೊಂಡಿದ್ದು, ನನಗೆ ಅರ್ಜೆಂಟ್ ಕೆಲಸವಿದೆ, ಹೋಗಿ ಬರುವುದಾಗಿ ಹೇಳಿ ಮಂಗನಹಳ್ಳಿ ಕ್ರಾಸ್ ಕಡೆಗೆ ಹೋಗಿದ್ದಾರೆ.

ರಾಜ್ಯಕ್ಕೆ ಬಿಜೆಪಿ ಘಟಾನುಘಟಿ ನಾಯಕರ ಲಗ್ಗೆ

ದಿನೇಶ್‍ಕುಮಾರ್ ಅವರು ಹೋದ ಕೇವಲ 20 ನಿಮಿಷದ ಅಂತರದಲ್ಲಿ ಇವರ ಮಗನ ಸ್ನೇಹಿತ ಕಿಶೋರ್ ಎಂಬಾತ ಇವರ ಮನೆ ಬಳಿ ಬಂದು ನಿಮ್ಮ ಅಪ್ಪ ದೊಡ್ಡಬಸ್ತಿಯ ಪೆಡರಲ್ ಬ್ಯಾಂಕ್ ರಸ್ತೆಯಲ್ಲಿ ಬಿದ್ದಿದ್ದು, ರಕ್ತ ಸುರಿಯುತ್ತಿದೆ ಎಂದು ಹೇಳಿದ್ದಾನೆ.

ಗಾಬರಿಯಾದ ಕುಟುಂಬದವರು ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ದಿನೇಶ್‍ಕುಮಾರ್ ಅವರು ರಕ್ತದ ಮಡುವಿನಲ್ಲಿ ಬೈಕ್ ಸಮೇತ ಬಿದ್ದಿದ್ದು, ಯಾವುದೋ ಹರಿತವಾದ ಆಯುಧರಿಂದ ಅವರ ಕುತ್ತಿಗೆಯ ಎಡಭಾಗಕ್ಕೆ ಮತ್ತು ಮುಂಭಾಗಕ್ಕೆ ಹೊಡೆದಿರುವುದಲ್ಲದೆ, ಎಡಭಾಗದ ಕಿವಿ ಕತ್ತರಿಸಿ ಕೊಲೆ ಮಾಡಿರುವುದು ಕಂಡು ಬಂದಿದೆ.
ಕೊಲೆ ನಡೆದ ಸ್ಥಳದಿಂದ 40 ಅಡಿ ದೂರದಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಬಿಸಾಡಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಪಶ್ವಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರು ಭೇಟಿ ನೀಡಿದ್ದಾರೆ.

ಮಂಡ್ಯದಲ್ಲಿ ಭೀಕರ ಕೊಲೆ, ಬೆಚ್ಚಿಬಿದ್ದ ಜನ

ಯಾವುದೋ ದುರುದ್ದೇಶದಿಂದ ದುಷ್ಕರ್ಮಿಗಳು ನನ್ನ ಗಂಡನನ್ನು ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಮೃತರ ಪತ್ನಿ ಲಕ್ಷ್ಮೀ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಜ್ಞಾನಭಾರತಿ ಠಾಣೆ ಪೊಲೀಸರು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

Carpenter, Dinesh Kumar, murder, Bengaluru,

Articles You Might Like

Share This Article