ಜಾತಿ ವ್ಯವಸ್ಥೆ ನಿರ್ಮೂಲನೆಯಾಗದೆ ಮನುಷ್ಯರಾಗಿ ಬದುಕಲು ಸಾಧ್ಯವಿಲ್ಲ: ಸಿದ್ದರಾಮಯ್ಯ

Social Share

ಬೆಂಗಳೂರು, ಜ.4- ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗದೆ ಮನುಷ್ಯರಾಗಿ ಬದುಕಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕ ರಾಜ್ಯ ಸವಿತಾ ಸಮಾಜ ಗಾಂಧಿ ಭವನದಲ್ಲಿಂದು ಹಮ್ಮಿಕೊಂಡಿದ್ದ ಎಂ.ಎಸ್.ಮುತ್ತುರಾಜ್ ಅವರ ನಾನು ಸ್ವಾಭಿಮಾನಿ ಕ್ಷೌರಿಕ ಎಂಬ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
12ನೆ ಶತಮಾನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ಸವಿತಾ ಸಮಾಜದ ಪ್ರತಿಪಾದನೆ ಮಾಡಿದ್ದರು. ಜಾತಿ ಮೂಲಕ ಅಸ್ಪೃಶ್ಯತೆ ಸೂಚಿಸುವ ವ್ಯವಸ್ಥೆಯನ್ನು ಖಂಡಿಸಬೇಕು ಎಂದರು. ಶಸ್ತ್ರ ಚಿಕಿತ್ಸೆಗೆ ಒಳಗಾದಾಗ ವೈದ್ಯರು ಸಂಬಂಧಿಕರ ರಕ್ತವನ್ನೇ ಕೊಡಬೇಕೆಂದು ಹೇಳುವುದಿಲ್ಲ. ಆತ ಬದುಕಿದರೆ ಸಾಕು ಎನ್ನುತ್ತೇವೆ. ಯಾವ ಜಾತಿಯವರ ರಕ್ತ ಕೊಡುತ್ತೇವೆ ಎಂದು ಕೇಳುವುದಿಲ್ಲ. ಬದುಕಿದ ಮೇಲೆ ಈ ಜಾತಿ ಆ ಜಾತಿ ಎಂದು ಹೇಳುತ್ತೇವೆ ನಾವೆಂಥ ಸ್ವಾರ್ಥಿಗಳು ಎಂದರು.
ಶ್ರೀಮಂತಿಕೆ ಇದ್ದರೆ ಕೆಳ ಜಾತಿಯವರನ್ನೂ ಗೌರವಿಸುತ್ತೇವೆ. ಜಾತಿ ವ್ಯವಸ್ಥೆಯಿಂದ ಮನುಷ್ಯರಾಗಿ ಬಾಳಲು ಕಷ್ಟವಾಗುತ್ತದೆ. ವೃತ್ತಿಯನ್ನೇ ಜಾತಿ ಮಾಡಿ ಮೇಲು-ಕೀಳು ಮಾಡಲಾಗಿದೆ. ಬೇರೆ ಬೇರೆ ವೃತ್ತಿಯವರಿಂದಲೇ ಸಮಾಜದಲ್ಲಿ ಬದುಕಲು ಸಾಧ್ಯ ಎಂದು ಹೇಳಿದರು.
ಬಸವಣ್ಣನವರು ಹೇಳಿದಂತೆ ಯಾವ ಜಾತಿಯೂ ಮೇಲಲ್ಲ-ಕೀಳಲ್ಲ, ಎಲ್ಲವೂ ಕಾಯಕ, ಶ್ರೇಣೀಕೃತ ವ್ಯವಸ್ಥೆ, ಇಲ್ಲಿ ಒಬ್ಬರ ಮೇಲೆ ಒಬ್ಬರನ್ನು ಕೂರಿಸಿದ್ದಾರೆ. ಮುತ್ತುರಾಜ್ ಅವರು ತಮ್ಮ ಅನುಭವದ ಆಧಾರದ ಮೇಲೆ ಕೃತಿಯಲ್ಲಿ ಹಳ್ಳಿ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮ ಅಜ್ಜಿ ಎದ್ದ ತಕ್ಷಣ ಕ್ಷೌರಿಕ ನಾರಾಯಣ ಎಂಬ ನನ್ನ ಸ್ನೇಹಿತನ ಮುಖ ನೋಡಬೇಡ ಎಂದಿದ್ದರು.
ನಾರಾಯಣ ಮತ್ತು ಶ್ರೀನಿವಾಸಾಚಾರಿ ಜತೆಗೆ ಇದ್ದಿದ್ದರಿಂದಲೇ ಇಲ್ಲಿಯವರೆಗೆ ನಾನು ಬರಲು ಸಾಧ್ಯವಾಯಿತು. ಮೌಢ್ಯ ಮತ್ತು ಕುಟಿಲ ಹುನ್ನಾರಗಳ ವಿರುದ್ಧ ಎಚ್ಚರವಾಗಿರಬೇಕು. ಪಟ್ಟಭದ್ರ ಹಿತಾಸಕ್ತಿಯನ್ನು ಭೇದಿಸದಿದ್ದರೆ ಸಮಾಜದಲ್ಲಿ ಬದಲಾವಣೆ ತರಲಾಗದು ಎಂದರು. ಎಲ್ಲರೂ ವಿದ್ಯಾವಂತರಾಗಬೇಕು, ಪ್ರಸ್ತುತ ಶೇ.78ರಷ್ಟು ಸಾಕ್ಷರತೆ ಇದ್ದರೂ ಜಾತಿ ವ್ಯವಸ್ಥೆ ಕಡಿಮೆಯಾಗುತ್ತಿಲ್ಲ. ವಿದ್ಯಾವಂತರಿಂದಲೇ ಹೆಚ್ಚು ಶೋಷಣೆಯಾಗುತ್ತಿದೆ ಎಂದರು.
ಸ್ವಾಭಿಮಾನಿಯಾಗಿರಬೇಕು, ಅಕ್ಷರಸ್ಥರಾಗಿ ವೈದ್ಯ, ಎಂಜಿನಿಯರ್‍ರಂತಹ ಪದವಿ ಪಡೆದು ವೃತ್ತಿ ಮಾಡಬಹುದು. ಈ ಕಾದಂಬರಿಯನ್ನು ಸಿನಿಮಾ ಮಾಡಬಹುದೆಂದು ಸಲಹೆ ನೀಡಿದರು. ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಶೂದ್ರರಲ್ಲಿ ಅಶ್ಪೃಶ್ಯತೆ ಬರಬಾರದು, ಅದು ಒಳ್ಳೆಯದಲ್ಲ.
ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯತೆ ನಿವಾರಣೆಯಾಗಿಲ್ಲ. ಮೊದಲು ಮುತ್ತುರಾಜ್ ಅವರು ಕಾದಂಬರಿಗೆ ವಿಶ್ವಮಾನವ ಎಂದು ಹೆಸರಿಟ್ಟಿದ್ದರು. ನನ್ನ ಸಲಹೆ ಮೇರೆಗೆ ಹೆಸರು ಬದಲಿಸಿದ್ದಾರೆ. ಸಮಾಜ ಕೇವಲ ಇಂಜಿನಿಯರ್ ಅಥವಾ ವೈದ್ಯರಿಂದ ನಡೆಯುವುದಿಲ್ಲ.
ಎಲ್ಲ ಕೆಲಸದವರು ಬೇಕು, ಎಲ್ಲರಿಗೂ ಪ್ರಾಧ್ಯಾನ್ಯತೆ ಸಿಗಬೇಕು. ಅಸಮಾನತೆ ಬಗ್ಗೆ ಹೆಚ್ಚು ಲೇಖಕರು ಬರೆಯಬೇಕು. ಪ್ರತಿಯೊಬ್ಬರೂ ಕ್ಷೌರಿಕರ ಮುಂದೆ ತಲೆ ತಗ್ಗಿಸಲೇಬೇಕು. ಮುತ್ತುರಾಜ್ ಅವರು ಗಣ್ಯ ವ್ಯಕ್ತಿಗಳ ಫೋಟೋ ಹಾಕಿ ಕಾದಂಬರಿ ಹೊರತಂದಿದ್ದಾರೆ ಎಂದರು.
ಪತ್ರಕರ್ತ ರವೀಂದ್ರಭಟ್ ಮಾತನಾಡಿ, ಕಾದಂಬರಿಗಿಂತ ಇವರ ಕೃತಿ ಚಿತ್ರಕಥೆಗೆ ಸೂಕ್ತವಾಗಿದೆ. ಆತ್ಮಕಥೆ ಬರೆದರೆ ರೋಚಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಸಚಿವ ಎಚ್.ಎಂ.ರೇವಣ್ಣ, ಕರ್ನಾಟಕ ಸವಿತಾ ಸಮಾಜದ ಅಧ್ಯಕ್ಷ ಎನ್.ಸಂಪತ್‍ಕುಮಾರ್ ಮತ್ತಿತರರಿದ್ದರು.

Articles You Might Like

Share This Article