ಬೆಂಗಳೂರು,ನ.26- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಿಸಿ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆಡಳಿತಾರೂಢ ಬಿಜೆಪಿಗೆ ಇತರೆ ಸಮುದಾಯಗಳ ಮೀಸಲಾತಿ ಹೆಚ್ಚಳ ತಲೆನೋವಾಗಿ ಪರಿಣಮಿಸುತ್ತಿದೆ.
ವಿಧಾಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ರಾಜ್ಯದ ಪ್ರಬಲ ಸಮುದಾಯಗಳಾದ ಪಂಚಮಶಾಲಿ ಲಿಂಗಾಯಿತ, ಒಕ್ಕಲಿಗ ಮತ್ತು ಕುರುಬ ಸೇರಿದಂತೆ ಬೇರೆ ಬೇರೆ ಸಮುದಾಯದವರೂ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಗಡುವು ನೀಡುತ್ತಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಚುನಾವಣಾ ವರ್ಷ ಆಗಿರುವುದರಿಂದ ಯಾವುದೇ ಸಮುದಾಯವನ್ನು ಎದುರು ಹಾಕಿಕೊಳ್ಳುವಂತೆಯೂ ಇಲ್ಲ. ವಿಶೇಷವಾಗಿ ಸೋಲು-ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಈ ಮೂರು ಸಮುದಾಯಗಳು ತಿರುಗಿ ಬಿದ್ದರೆ ಏನು ಎಂಬ ಚಿಂತೆ ಸಿಎಂ ಬೊಮ್ಮಾಯಿ ಅವರನ್ನು ಕಾಡುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಸುಮಾರು 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರೇ ಪ್ರಾಬಲ್ಯ ಸಾಧಿಸಿದರೆ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಸುಮಾರು 60ಕ್ಕೂ ಕ್ಷೇತ್ರಗಳಲ್ಲಿ ಪಂಚಮಶಾಲಿ ಸಮುದಾಯ ನಿರ್ಣಾಯಕವಾಗಿದೆ.
ಜೈಲಲ್ಲಿ AAP ಸಚಿವನ ದರ್ಬಾರ್ ಕುರಿತ ಮತ್ತೊಂದು ವಿಡಿಯೋ ರಿಲೀಸ್
ಉಳಿದಂತೆ ಕುರುಬರು ಕೂಡ ಅನೇಕ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವುದರಿಂದ ಆ ಸಮುದಾಯದ ಬೇಡಿಕೆಯನ್ನು ಕಡೆಗಣಿಸುವ ಸ್ಥಿತಿಯಲ್ಲಿ ಸರ್ಕಾರವೂ ಇಲ್ಲ. ಎಸ್ಸಿ-ಎಸ್ಟಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಳ ಮಾಡಿದಂತೆ ನಮಗೂ ಕೂಡ ಹೆಚ್ಚಳ ಮಾಡಬೇಕು. ಯಾವುದೇ ಸಮುದಾಯಕ್ಕೆ ಮೀಸಲಾತಿ ಕೊಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ ಸಂವಿಧಾನಬದ್ದವಾದ ಮೀಸಲಾತಿ ನಮಗೂ ಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ.
2 ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 19ರ ಗಡುವು ನೀಡಿದ್ದಾರೆ. ಡಿಸೆಂಬರ್ 19ರಿಂದಲೇ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಇದಕ್ಕೂ ಮೊದಲು ಹಿಂದುಳಿದ ಆಯೋಗದಿಂದ ವರದಿ ಪಡೆದುಕೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಡಿಸೆಂಬರ್ 22ರಂದು ಬೆಳಗಾವಿಯಲ್ಲಿ ಬೃಹತ್ ಅಧಿವೇಶನ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ.
ಒಕ್ಕಲಿಗರಿಂದಲೂ ಮೀಸಲಾತಿಗೆ ಪಟ್ಟು:
ಪಂಚಮಸಾಲಿಗಳ ಜೊತೆಗೆ ಒಕ್ಕಲಿಗ ಸಮುದಾಯದವೂ ಮೀಸಲಾತಿಗೆ ಪಟ್ಟು ಹಿಡಿದಿದೆ. ಮೀಸಲಾತಿ ಪ್ರಮಾಣವನ್ನು ಶೇ. 4ರಿಂದ 12ಕ್ಕೆ ಏರಿಕೆ ಮಾಡಬೇಕು ಎಂಬುವುದು ಒಕ್ಕಲಿಗರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲು ಒಕ್ಕಲಿಗರು ಮುಂದಾಗಿದ್ದಾರೆ.
ನವೆಂಬರ್ 27ರಂದು ಬೆಂಗಳೂರಿನಲ್ಲಿ ಪ್ರಮುಖ ಸ್ವಾಮೀಜಿಗಳು, ರಾಜಕಾರಣಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಡಾ. ಅಶ್ವತ್ಥ ನಾರಾಯಣ, ಡಿ.ವಿ.ಸದಾನಂದ ಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಲಾಗಿದೆ. ಈ ಸಭೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭಾಗಿಯಾಗಲಿದ್ದಾರೆ.
ಕುರುಬರಿಂದಲೂ ಬೇಡಿಕೆ: ಇನ್ನು ಸಮುದಾಯಕ್ಕೆ ಎಸ್.ಟಿ , ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕುರುಬ ಸಮುದಾಯದಿಂದಲೂ ಹೋರಾಟ ನಡೆಯುತ್ತಿದೆ. ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಪಟ್ಟ , ರಾಜಗೊಂಡ , ಜೇನುಕುರುಬ , ಕಾಡು ಕುರುಬ, ಕಟ್ಟುನಾಯಕನ್ , ಕುರುಮನ್ಸ್ ಮತ್ತು ಕ್ರಮ ಸಂಖ್ಯೆ 28 ರಲ್ಲಿ ಕುರುಬ ಎಂಬ ಜಾತಿಗಳು ಇದ್ದರೂ ಸಹ ರಾಜ್ಯವ್ಯಾಪಿ ವಿಸ್ತಾರ ಮಾಡಿಲ್ಲ ಎಂಬುವುದು ಅವರ ಆರೋಪವಾಗಿದೆ.
2018 ರ ಸಮ್ಮಿಶ್ರ ಸರ್ಕಾರದಲ್ಲಿ ಎಸ್‍ಟಿ ಮೀಸಲಾತಿಗಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದಿಂದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಿ ಅಧ್ಯಯನ ಸಂಪೂರ್ಣವಾಗಿದೆ. ಸರ್ಕಾರ ಇದನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂಬುವುದು ಆ ಸಮುದಾಯದ ಮುಖಂಡರ ಬೇಡಿಕೆಯಾಗಿದೆ.
“ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ನಾವು ವಿಶ್ವಕಪ್ ಬಹಿಷ್ಕರಿಸಬೇಕಾಗುತ್ತದೆ”
ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮೀಸಲಾತಿ ವಿಷಯಗಳ ಬಗ್ಗೆ, ಕಾಯಂ ಹಿಂದುಳಿದ ವರ್ಗಗಳ ಆಯೋಗವು ಅದನ್ನು ಪರಿಶೀಲಿಸುತ್ತಿದೆ. ಆಯೋಗದಲ್ಲಿ ತಜ್ಞರೂ ಇದ್ದಾರೆ. ಆಯೋಗವು ಮಾಡಿದ ಶಿಫಾರಸುಗಳನ್ನು ಆಧರಿಸಿ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತದೆ. ಇದನ್ನು ಗಣನೆಗೆ ತೆಗೆದುಕೊಂಡು ಸರ್ಕಾರವು ಕಾಲಕಾಲಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಸರ್ಕಾರ ಹೇಳಿದೆ.
ಮಹಾರಾಷ್ಟ್ರದ 42 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಲು ನಿರ್ಣಯ
ಒಟ್ಟಿನಲ್ಲಿ ಮೀಸಲಾತಿ ಬೇಡಿಕೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ರಾಜ್ಯ ಸರ್ಕಾರ ಚುನಾವಣೆ ದೃಷ್ಟಿಯಿಂದ ಇದನ್ನು ಯಾವ ರೀತಿಯಲ್ಲಿ ಬಗೆಹರಿಸಲಿದೆ ಎಂಬುವುದು ಕೂಡಾ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
categories, reservation, Increase, demand, BJP, Govt,