ಕಲ್ಬುರ್ಗಿ,ಸೆ.17- ಸರ್ವಪಕ್ಷ ನಿಯೋಗಕ್ಕೆ ಸಮಯ ನೀಡುವಂತೆ ಮತ್ತೊಮ್ಮೆ ಪತ್ರ ಬರೆಯುತ್ತೇವೆ. ನಾಳೆಯಿಂದ 5 ದಿನಗಳ ಕಾಲ ಸಂಸತ್ ಅಧಿವೇಶನ ನಡೆಯುತ್ತಿದೆ. ಈ ಸಮಯದಲ್ಲಿ ದೆಹಲಿಗೆ ನಿಯೋಗ ತೆರಳಲು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲ್ಬುರ್ಗಿಯಲ್ಲಿಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಬರದ ಪರಿಸ್ಥಿತಿ, ಕಾವೇರಿ ನದಿ ನೀರು ಹಾಗೂ ಅಂತರಾಜ್ಯ ನದಿ ವಿವಾದಗಳ ಕುರಿತಂತೆ ಕೇಂದ್ರಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮನವಿ ಸಲ್ಲಿಸಲು ನಿಯೋಗ ತೆರಳಲಿದೆ ಎಂದು ಹೇಳಿದರು. ರಾಜ್ಯ ಬರ ಪರಿಸ್ಥಿತಿಯ ಕುರಿತು ಈಗಾಗಲೇ ಸಮೀಕ್ಷೆ ನಡೆಯುತ್ತಿದೆ. ವರದಿ ಬಂದ ಬಳಿಕ ಕೇಂದ್ರ ಸರ್ಕಾರದಿಂದ ಯಾವ ಪ್ರಮಾಣದ ಪರಿಹಾರ ಕೇಳಬೇಕು ಎಂಬ ಬಗ್ಗೆ ಮನವಿ ಸಲ್ಲಿಸುತ್ತೇವೆ ಎಂದರು.
ಬರಪೀಡಿತ ಪ್ರದೇಶಗಳ ಮಾನದಂಡಗಳನ್ನು ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ತಾವು ಪತ್ರಬರೆದಿದ್ದು, ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಧಾನಿಯವರ ಸಮಯ ಕೇಳಲಾಗಿತ್ತು. ಅದಕ್ಕೂ ಉತ್ತರಿಸಿಲ್ಲ. ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆದು ನಾವು ಚರ್ಚೆ ನಡೆಸಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ ಎಂದರು.
ನೂತನ ಸಂಸತ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಉಪರಾಷ್ಟ್ರಪತಿ
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳಲ್ಲಿ ಪರಿಸರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮತ್ತಷ್ಟು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಸಚಿವ ಸಂಪುಟದ ಉಪಸಮಿತಿ ಸಭೆ ನಡೆಸಿ ಪರಿಶೀಲನೆ ನಡೆಸಲಿದೆ. ಹೆಚ್ಚುವರಿ ತಾಲೂಕುಗಳ ಬರಘೋಷಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದರು. ಬರಪೀಡಿತ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ, ಕುಡಿಯುವ ನೀರು, ಮೇವು ಪೂರೈಕೆ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳೆನಷ್ಟಕ್ಕೂ ಪರಿಹಾರ ನೀಡಲಾಗುತ್ತದೆ. ಬರಪೀಡಿತ ಪ್ರದೇಶಗಳಿಂದ ಜನ ವಲಸೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ತಮಿಳುನಾಡಿಗೆ ಕಾವೇರಿ ನದಿಯ ಅಣೆಕಟ್ಟುಗಳಿಂದ ಸಾಮಾನ್ಯ ವರ್ಷದಲ್ಲಿ 177 ಟಿಎಂಸಿ ನೀರು ಬಿಡಬೇಕು ಎಂದು ನ್ಯಾಯಾಕರಣದ ಆದೇಶವಿದೆ. ಈವರೆಗೂ 99 ಟಿಎಂಸಿ ನೀರು ಬಿಡಬೇಕಿತ್ತು ಆದರೆ 37 ಟಿಎಂಸಿ ಮಾತ್ರ ಬಿಡಲಾಗಿದೆ. ತಮಿಳುನಾಡು ನೀರು ಬಿಡುವಂತೆ ಒತ್ತಾಯಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅಲ್ಲಿ ನ್ಯಾಯದ ಆದೇಶ ಪಾಲನೆ ಆಗಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಬಾರದು ಎಂಬ ಕಾರಣಕ್ಕಾಗಿ ಸ್ವಲ್ಪ ನೀರು ಬಿಡಲಾಗಿದೆ.
ಸರ್ವಾಧಿಕಾರಿ ಆಡಳಿತವನ್ನು ಕಿತ್ತೊಗೆಯಲು ಸಂಘಟನಾತ್ಮಕ ಹೋರಾಟ: ಮಲ್ಲಿಕಾರ್ಜುನ ಖರ್ಗೆ
ಇದು ನಮ್ಮ ಸರ್ಕಾರವಷ್ಟೇ ಅಲ್ಲ ಪ್ರತಿಯೊಂದು ಸರ್ಕಾರಗಳು ಕಾಲಕಾಲಕ್ಕೆ ತಮಿಳುನಾಡಿಗೆ ನೀರು ಬಿಟ್ಟಿವೆ. ರಾಜಕೀಯವಾಗಿ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕುಡಿಯುವ ನೀರು, ಬೆಳೆ ರಕ್ಷಣೆ ಹಾಗೂ ಇತರೆ ಉದ್ದೇಶಗಳಿಗೆ 106 ಟಿಎಂಸಿ ಬೇಕು. ಆದರೆ ಲಭ್ಯವಿರುವುದು 53 ಟಿಎಂಸಿ ಮಾತ್ರ ಎಂದು ಹೇಳಿದರು.
Cauverycrisis, #Siddaramaiah, #allparty, #delegation, #Delhi,