ಬೆಂಗಳೂರು, ಸೆ.19- ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿಂದು ಕರ್ನಾಟಕದ ಸಂಸದರನ್ನು ಭೇಟಿ ಮಾಡಿ, ಕಾವೇರಿ ನದಿ ನೀರಿನ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು ರಾಜಕೀಯ ಒತ್ತಡ ತರಲು ಪ್ರಯತ್ನ ನಡೆಸಿದ್ದಾರೆ. ಇಂದು ಬೆಳಗ್ಗೆ ದೆಹಲಿಗೆ ಪ್ರಯಾಣಿಸಿದ ಅವರು ದೆಹಲಿಯಲ್ಲಿ ರಾಜ್ಯದ ಸಂಸದರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಅದಕ್ಕೂ ಮುನ್ನಾ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನ್ಯಾಯಾಲಯಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಲು ಬೊಮ್ಮಾಯಿ ಈ ಸಲಹೆ ನೀಡಿದ್ದಾರೆ. ಈಗ ಯಾವ ಕಾರಣಕ್ಕೂ ನೀರು ಬಿಡಬೇಡಿ ಎನ್ನುತ್ತಿದ್ದಾರೆ. ಹಿಂದೆ ಅವರೇ ಜಲಸಂಪನ್ಮೂಲ ಸಚಿವರಾಗಿದ್ದರು, ಮುಖ್ಯಮಂತ್ರಿಯಾಗಿದ್ದರು. ಆಗೇಲ್ಲಾ ರಾತ್ರೋರಾತ್ರಿ ನೀರು ಬಿಟ್ಟಿದ್ದಾರಲ್ಲ ಎಂದು ಪ್ರಶ್ನಿಸಿದರು.
ಸಾಮಾನ್ಯವಾಗಿ ಬೇರೆ ಯಾರೋ ಈ ಮಾತು ಹೇಳಿದ್ದರೆ ಮಾಹಿತಿ ಇಲ್ಲ ಎನ್ನಬಹುದಿತ್ತು. ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ಇರುವವರು, ಅಧಿಕಾರ ನಡೆಸಿದ ಬೊಮ್ಮಾಯಿ ಹೇಳುತ್ತಿರುವುದು ಆಶ್ಚರ್ಯವಾಗಿದೆ ಎಂದರು.
ಹೊಸ ಸಂಸತ್ ಭವನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನಿನ್ನೆ ಸಂಸತ್‍ನಲ್ಲಿ ಮಾತನಾಡುವಾಗ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆ ಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಅದು ಸರಿಯಾಗಿದೆ. ಅವರ ಹಿರಿತನಕ್ಕೆ ತಕ್ಕುದ್ದಾದ ಸಲಹೆ. ಆದರೆ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರು ಅನಗತ್ಯವಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿಲ್ಲ. ಹಾಗಾಗಿ ತಮಿಳುನಾಡಿಗೆ ನೀರು ಬೀಡುವುದು ಕಷ್ಟದ ಕೆಲಸ. ಆದರೆ ನಾವು ನ್ಯಾಯಾಲಯಕ್ಕೂ ಗೌರವ ನೀಡಬೇಕಿದೆ. ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದೆ. ಇಲ್ಲಿ ನೀರು ಬಿಡದೆ ಇದ್ದರೆ ಅಲ್ಲಿ ಸಮಸ್ಯೆಯಾಗಿ, ಪ್ರಾಧಿಕಾರದ ಆದೇಶ ಪಾಲನೆ ಮಾಡಿ ಎಂದರೆ ಕಷ್ಟವಾಗಲಿದೆ. ಒಂದು ವೇಳೆ ಅಂತಹ ಸಂದರ್ಭ ಸೃಷ್ಟಿಯಾದರೆ ನಮ್ಮ ಬಳಿ ಬೇರೆ ಆಯ್ಕೆಗಳಿಲ್ಲ. ಬಸವರಾಜ ಬೊಮ್ಮಾಯಿ ಅವರ ಬಳಿ ಏನಾದರೂ ಬೇರೆ ಆಯ್ಕೆಗಳಿವೆಯೇ ಎಂದು ಪ್ರಶ್ನಿಸಿದರು.
ತಾವು ಇಂದು ದೆಹಲಿಗೆ ತೆರಳುತ್ತಿದ್ದು, ಅಲ್ಲಿ ರಾಜ್ಯದ ಸಂಸದರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತೇವೆ. ಬೊಮ್ಮಾಯಿ ಅವರು ರಾಜಕೀಯ ಬದಿಗಿಟ್ಟು ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಪ್ರಧಾನಿಯವರ ಮೇಲೆ ಒತ್ತಡ ಏರಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
Cauvery, #waterdispute, #DCM, #DKSivakumar,