ದನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಮಮತಾ ಆಪ್ತನನ್ನ ಬಂಧಿಸಿದ ಸಿಬಿಐ

Social Share

ಕೊಲ್ಕತ್ತಾ, ಆ.11- ದನಗಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಅನುಬ್ರತಾರನ್ನು ಇಂದು ಬೆಳಗ್ಗೆ ಬಂಧಿಸಿದೆ. ಬಿರಭಮ್ ಜಿಲ್ಲೆಯ ಟಿಎಂಸಿ ಅಧ್ಯಕ್ಷರೂ ಆಗಿರುವ ಅನುಬ್ರತಾರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ 10 ಬಾರಿ ಸಮನ್ಸ್ ನೀಡಿತ್ತು. ಆದರೆ ಅವರು ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ದೂರ ಉಳಿದಿದ್ದರು. ಸಿಬಿಐ ನ್ಯಾಯಾಲಯದ ಮೊರೆ ಹೋಗಿದ್ದು, ಸೂಕ್ತ ಆದೇಶ ಪಡೆದು ಇಂದು ಬೆಳಗ್ಗೆ ಅವರ ಮನೆಯಲ್ಲಿ ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಅನುಬ್ರತಾ ಭಾರೀ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಆಪ್ತ ಬಳಗದಲ್ಲಿರುವ ಅವರ ಭದ್ರತೆಗಾಗಿ ಗನ್‍ಮ್ಯಾನ್ ನೀಡಲಾಗಿತ್ತು. ಪಶ್ಚಿಮ ಬಂಗಾಳದಿಂದ ಗಡಿಯ ಮೂಲಕ ಬಾಂಗ್ಲಾದೇಶಕ್ಕೆ ದನಗಳ ಕಳ್ಳ ಸಾಗಾಣಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಅಸನ್ಸೋಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ 40 ಪುಟಗಳ ದೋಷಾರೋಪಣಾ ಪಟ್ಟಿಯಲ್ಲಿ 11 ಮಂದಿ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.

ಇದೇ ಪ್ರಕರಣದಲ್ಲಿ ಅನುಬ್ರತಾರ ಗನ್‍ಮ್ಯಾನ್ ಸೈಗಲ್ ಹುಸೇನ್‍ನನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು, ಆತನನ್ನು ಬಂಧಿಸಲಾಗಿದೆ. ಪೊಲೀಸ್ ಕಾನ್ಸ್‍ಟೆಬಲ್ ಆಗಿರುವ ಹುಸೇನ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 49ಕ್ಕೂ ಹೆಚ್ಚು ಆಸ್ತಿಗಳನ್ನು ಸಿಬಿಐ ಪತ್ತೆ ಹಚ್ಚಿದೆ.

ಆತನ ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ದನದ ಕಳ್ಳ ಸಾಗಾಣಿಕೆದಾರರು ಮತ್ತು ದನಗಳ ಮಾಲೀಕರ ಜೊತೆ ನೇರ ಸಂಪರ್ಕ ಇರುವುದು ಪತ್ತೆಯಾಗಿದೆ. ಆತ ನೀಡಿದ ಮಾಹಿತಿ ಮೇರೆಗೆ ಅನುಬ್ರತಾರನ್ನು ವಿಚಾರಣೆ ನಡೆಸಲು ಸಿಬಿಐ ಮುಂದಾಗಿತ್ತು. ಅವರು ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

2020ರಲ್ಲಿ ಎಫ್‍ಐಆರ್ ದಾಖಲಿಸಿದಾಗಲೇ ಸಿಬಿಐ ಅನುಬ್ರತಾರ ಹೆಸರನ್ನು ನಮೂದಿಸಿತ್ತು. 2015ರಿಂದ 2017ರ ನಡುವೆ ಬಿಎಸ್‍ಎಫ್ ಯೋಧರು ಸುಮಾರು 20 ಸಾವಿರ ದನಗಳ ತಲೆಗಳನ್ನು ಜಪ್ತಿ ಮಾಡಿದ್ದರು. ಅದನ್ನು ಆಧರಿಸಿ ಸಿಬಿಐ ತನಿಖೆ ನಡೆಸುತ್ತಿದೆ.

Articles You Might Like

Share This Article