ನವದೆಹಲಿ,ಸೆ.29- ಸಾಮಾಜಿಕ ಪಿಡುಗಾಗಿರುವ ಮಾದಕವಸ್ತುಗಳ ವಿರುದ್ಧ ಸಮರ ಸಾರಿರುವ ಸಿಬಿಐ ಇಂದು ದೇಶಾದ್ಯಂತ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದು, ಅಪಾರ ಪ್ರಮಾಣದ ಸರಕ್ಕನ್ನು ವಶಪಡಿಸಿಕೊಂಡು 175ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ.
ರಾಷ್ಟ್ರೀಯ ಮಾದಕವಸ್ತುಗಳ ನಿಗ್ರಹ ದಳದೊಂದಿಗೆ ಸಿಬಿಐ ಜಂಟಿ ಕಾರ್ಯಾಚರಣೆ ನಡೆಸಿದೆ. ಪಂಜಾಬ್, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಿಢೀರ್ ದಾಳಿ ನಡೆಸಲಾಗಿದೆ.
ಆಪರೇಷನ್ ಗರುಡಾ ಹೆಸರಿನ ಈ ಕಾರ್ಯಾಚರಣೆಗೆ ಕಳೆದ ಒಂದು ವಾರದಿಂದ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಇಂಟರ್‍ಪೆಪೋಲ್‍ನ ಸಹಭಾಗಿತ್ವದಲ್ಲಿ ಸಿಬಿಐ 127ಕ್ಕೂ ಹೆಚ್ಚು ಮಾದಕವಸ್ತು ಕಳ್ಳಸಾಗಾಣಿಕೆ ಪ್ರಕರಣಗಳನ್ನು ದಾಖಲಿಸಿದೆ.
ಎನ್‍ಸಿಬಿ, ರಾಜ್ಯ ಪೊಲೀಸರು ಸಿಬಿಐಗೆ ಸಾಥ್ ನೀಡಿದ್ದಾರೆ. ಆಯಾ ರಾಜ್ಯಗಳು ಮಾದಕವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ. ಆದರೆ ಈ ಜಾಲ ಅಂತಾರಾಷ್ಟ್ರೀಯ ಸಂಪರ್ಕ ಹೊಂದಿದ್ದು, ಡಾರ್ಕ್ ವೆಬ್ ಮೂಲಕ ವಹಿವಾಟು ನಡೆಸುತ್ತಿದೆ.
ವಿದೇಶಿ ವ್ಯಕ್ತಿಗಳು ಭಾಗಿಯಾಗಿರುವುದರಿಂದ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಬೇಕಿದೆ. ಹೀಗಾಗಿ ಸಿಬಿಐ ಇಂಟರ್‍ಪೋಲ್ ಸಹಭಾಗಿತ್ವದಲ್ಲಿ ಸಮರ ಆರಂಭಿಸಿದೆ.