1.34 ಕೋಟಿ ಮೌಲ್ಯದ ಡ್ರಗ್ ವಶ, 11 ಮಂದಿ ಬಂಧನ

Social Share

ಬೆಂಗಳೂರು, ಫೆ.9- ಸಿಸಿಬಿ ಪೊಲೀಸರು ಕೀನ್ಯಾ ಮತ್ತು ತಾಂಜೇನಿಯಾ ದೇಶದ ಇಬ್ಬರು ಪ್ರಜೆಗಳೂ ಸೇರಿದಂತೆ 11 ಮಂದಿಯನ್ನು ಬಂಧಿಸಿ 1.34 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, ಡ್ರಗ್ಸ್ ಪೆಡ್ಲರ್‍ಗಳು ಮಾದಕ ವಸ್ತುಗಳನ್ನು ನಿರ್ಜನ ಪ್ರದೇಶ ಗಳಲ್ಲಿಟ್ಟು ಅದರ ಫೋಟೋ ತೆಗೆದು ವಾಟ್ಸಾಪ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದರು.

ನಂತರ ಅವರು ಸ್ಥಳಕ್ಕೆ ಬಂದು ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದರು. ಡ್ರಗ್ಸ್ ಪೆಡ್ಲರ್‍ಗಳೇ ಡೆಲವರಿ ಬಾಯ್ಸ್‍ಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ಬಾಕ್ಸ್‍ಗಳಲ್ಲಿ ಡ್ರಗ್ಸ್‍ಗಳನ್ನು ಸರಬರಾಜು ಮಾಡುತ್ತಿರುವುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಯಾವ ಮೂಲಗಳಿಂದ ಮಾದಕ ವಸ್ತು ಸರಬರಾಜು ಆಗುತ್ತಿವೆ ಎಂಬುದನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಬಾರಿ ಪ್ರತಿಭಟನೆ

ನಗರದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ಡ್ರಗ್ ಪೆಡ್ಲರ್‍ಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದು ಕಳೆದ ತಿಂಗಳಿನಿಂದ ಮಾಹಿತಿಯನ್ನು ಸಂಗ್ರಹಿಸಿ ಮಡಿವಾಳ, ಬಾಣಸವಾಡಿ, ಸುದ್ದಗುಂಟೆಪಾಳ್ಯ, ಕೆ.ಆರ್.ಪುರ ಮತ್ತು ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿದ್ದಾರೆ.

ಮಡಿವಾಳ:
ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ 60 ಲಕ್ಷ ಮೌಲ್ಯದ 500 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಎರಡು ಮೊಬೈಲ್‍ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ನೆಲೆಸಿರುವ ಕೇರಳ ಮೂಲದವನೇ ಆದ ಡ್ರಗ್ ಪೆಡ್ಲರ್‍ನಿಂದ ಖರೀದಿ ಮಾಡಲಾಗಿದ್ದ ಎಂಡಿಎಂಎ ಕ್ರಿಸ್ಟಲ್ ಅನ್ನು ಕೇರಳಕ್ಕೆ ಸರಬರಾಜು ಮಾಡುವ ಕೃತ್ಯದಲ್ಲಿ ತೊಡಗಿದುದ್ದು ವಿಚಾರಣೆಯಿಂದ ತಿಳಿದು ಬಂದಿದೆ.

ಬಾಣಸವಾಡಿ:
ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ಕೀನ್ಯಾ ಮತ್ತು ತಾಂಜೇನಿಯಾ ದೇಶದ ಇಬ್ಬರು ಪ್ರಜೆಗಳನ್ನು ಬಂಧಿಸಿ 20 ಲಕ್ಷ ರೂ. ಮೌಲ್ಯದ 200 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಒಂದು ಮೊಬೈಲ್, ತೂಕದ ಯಂತ್ರ, 20 ಕವರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಇಬ್ಬರು ವಿದೇಶಿ ಪ್ರಜೆಗಳು ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದು, ನಂತರ ಆಫ್ರಿಕಾ ಕಿಚನ್‍ಗಳಿಗೆ ಬರುವ ವಿದೇಶಿ ಪ್ರಜೆಗಳನ್ನು ಪರಿಚಯ ಮಾಡಿಕೊಂಡು ಅವರಿಂದ ಕಡಿಮೆ ಬೆಲೆಗೆ ನಿಷೇ ಮಾದಕ ವಸ್ತುಗಳನ್ನು ಖರೀದಿ ಮಾಡಿ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದರು. ಇವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್.ಅಶೋಕ್ ಬದಲಿಗೆ ಮಂಡ್ಯ ಉಸ್ತುವಾರಿ ಹೊಣೆ ಗೋಪಾಲಯ್ಯ ಹೆಗಲಿಗೆ..?

ಸುದ್ದಗುಂಟೆಪಾಳ್ಯ:
ಕೇರಳ ಮೂಲದ ಮೂವರು ಡ್ರಗ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 23 ಲಕ್ಷ ಬೆಲೆಯ 102.21 ಗ್ರಾಂ ಎಂಡಿಎಂಎ ಕ್ರಿಸ್ಟಲ್, 43.43 ಗ್ರಾಂ ತೂಕದ 117 ಎಂಡಿಎಂಎ ಎಕ್ಸ್‍ಟಸಿಪಿಲ್ಸ್, 83.67 ಗ್ರಾಂ ಹ್ಯಾಶಿಶ್ ಆಯಿಲ್ ಹಾಗೂ ಮೂರು ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಮೂವರು ಮಾದಕ ವಸ್ತುಗಳನ್ನು ಆಫ್ರಿಕಾ ಪ್ರಜೆಗಳಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ ನಗರದ ಐಟಿಬಿಟಿ ಉದ್ಯೋಗಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಫೋಟೋ ಲೊಕೇಶನ್ ಮುಖಾಂತರ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು. ಇವರ ವಿರುದ್ಧ ಸುದ್ದಗುಂಟೆಪಾಳ್ಯ ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಆರ್ ಪುರ:
ಕೇರಳದ ಇಬ್ಬರು ಹಾಗೂ ಮೇಘಾಲಯ ಮೂಲದ ಒಬ್ಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ 30 ಲಕ್ಷ ಬೆಲೆಯ 100 ಗ್ರಾಂ ಎಂಡಿಎಂಎ ಕ್ರಿಸ್ಟಲ್ , 219 ಎಲ್‍ಎಸ್‍ಟಿ ಸ್ಟಿಪ್ಸ್, 7.52 ಗ್ರಾಂ ಎಂಡಿಎಂಎ ಎಕ್ಸ್‍ಟಸಿ ಪಿಲ್ಸ್ ಹಾಗೂ ಮೂರು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ಕೇರಳ ಮತ್ತು ಹೊರರಾಜ್ಯದ ಕೆಲವು ಕಾಲೇಜು ಡ್ರಾಪ್‍ಔಟ್ ಹುಡುಗರನ್ನು ತಿಂಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಪುಸಲಾಯಿಸಿ ಅವರಿಗೆ ಕೆ.ಆರ್. ಪುರದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಟ್ಟು ಆಫ್ರಿಕಾ ಮೂಲದ ಪ್ರಜೆಗಳಿಂದ ಡ್ರಗ್ಸ್‍ಗಳನ್ನು ತರಿಸಿ ನಗರದ ಸ್ಥಳೀಯ ಐಟಿಬಿಟಿ ಉದ್ಯೋಗಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಿಸುತ್ತಿದ್ದನು. ಇವರ ವಿರುದ್ಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಏ.1ರಿಂದ ಗುಜರಿ ನೀತಿ ಜಾರಿ

ಬಂಡೇಪಾಳ್ಯ:
ಡ್ರಗ್ಸ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 1.60 ಲಕ್ಷ ರೂ. ಮೌಲ್ಯದ 21.24 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಒಂದು ಮೊಬೈಲ್, ಒಂದು ತೂಕದ ಯಂತ್ರ ಹಾಗೂ 14 ಕವರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದಲ್ಲಿರುವ ಪ್ರಮುಖ ಆರೋಪಿಯ ನಿರ್ದೇಶನದ ಮೇರೆಗೆ ಆಫ್ರಿಕಾ ಮೂಲದ ಪ್ರಜೆಗಳಿಂದ ಡ್ರಗ್ಸ್ ಪಡೆದು ಆತ ತಿಳಿಸುವ ವ್ಯಕ್ತಿಗಳಿಗೆ ಡ್ರಗ್ಸ್ ನ್ನು ಫೋಟೋ ಲೊಕೇಶನ್ ಮೂಲಕ ಸರಬರಾಜು ಮಾಡುತ್ತಾ ಹಣವನ್ನು ಕೇರಳ ರಾಜ್ಯದಲ್ಲಿರುವ ತನ್ನ ಬ್ಯಾಂಕ್ ಖಾತೆಗೆ ಆನ್‍ಲೈನ್ ಮುಖಾಂತರ ಪಡೆದುಕೊಂಡು ಬಂದ ಲಾಭದಲ್ಲಿ ಕಮಿಷನ್ ರೂಪದಲ್ಲಿ ಹಣ ನೀಡುತ್ತಿದ್ದನು. ಇವರ ವಿರುದ್ಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಿಮೆ ಸಮಯದಲ್ಲಿ ಡ್ರಗ್ಸ್ ಪೆಡ್ಲರ್‍ಗಳು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇದಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಹಣ ಸಂಪಾದನೆಯಲ್ಲಿ ತೊಡಗಿದುದ್ದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

CCB, police ,11 arrested, 1.34 crore, Drug seized,

Articles You Might Like

Share This Article