ಬೆಂಗಳೂರು, ಫೆ.4- ಮೊಬೈಲ್ ಅಕ್ಸೆಸರಿಸ್ ಹಾಗೂ ಪೆನ್ ಡ್ರೈವ್ಗಳ ನಕಲಿ ಉತ್ಪನ್ನಗಳನ್ನು ಪ್ರತಿಷ್ಠಿತ ಕಂಪೆನಿಗಳ ಮಾಲುಗಳೆಂದು ಸಾರ್ವಜನಿಕರನ್ನು ನಂಬಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬೇಧಿಸಿ ಒಂದು ಕೋಟಿ ರೂ. ಮೌಲ್ಯದ ನಕಲಿ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಎಸ್ಜೆ ಪಾರ್ಕ್ ವ್ಯಾಪ್ತಿಯಲ್ಲಿರುವ ಎಸ್ಪಿ ರಸ್ತೆ, ಶ್ರೀ ವಿನಾಯಕ ಎಲೆಕ್ಟ್ರಾನಿಕ್ ಫ್ಲಾಜಾದ 3ನೆ ಮಹಡಿಯಲ್ಲಿ ಪ್ರಕಾಶ್ ಟೆಲಿಕಾಂ ಅಂಗಡಿ ಇದೆ.
ದೇಶಾದ್ಯಂತ ಮೊಬೈಲ್ ಅಕ್ಸೆಸರಿಸ್ಗಳ ಪೂರೈಕೆದಾರರಾಗಿದ್ದು , ಇವರು ಪ್ರತಿಷ್ಠಿತ ಕಂಪೆನಿಗಳಾದ ಆ್ಯಪಲ್, ಸ್ಯಾಮ್ಸಂಗ್, ವಿವೋ, ಓಪೋ, ರಿಯಲ್ಮಿ ಕಂಪೆನಿಗಳ ಹೆಸರಿನಲ್ಲಿ ನಕಲಿ ಮೊಬೈಲ್ ಅಕ್ಸೆಸರಿಸ್ಗಳನ್ನು ಮತ್ತು ಬೋಟ್ ಕಂಪೆನಿಯ ಬ್ಲೂಟೂಥ್ ಸ್ಪೀಕರ್, ಮತ್ತೊಂದು ಕಂಪೆನಿಯ ಇಯರ್ ಫೋನ್ಗಳು ಹಾಗೂ ಎಚ್ಪಿ ಮತ್ತು ಸ್ಯಾಂಡಿಸ್ಕ್ ಕಂಪೆನಿಯ ನಕಲಿ ಪೆನ್ ಡ್ರೈವ್, ಮೆಮೋರಿ ಕಾರ್ಡ್ ಉತ್ಪನ್ನಗಳನ್ನು ದಾಸ್ತಾನು ಮಾಡಲಾಗಿತ್ತು.
ಇವುಗಳು ಪ್ರತಿಷ್ಠಿತ ಕಂಪೆನಿಗಳ ಅಸಲಿ ಮಾಲುಗಳೆಂದು ಸಾರ್ವಜನಿಕರನ್ನು ನಂಬಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣ ಅಂಗಡಿ ಮೇಲೆ ದಾಳಿ ಮಾಡಿ ಬರೋಬ್ಬರಿ ಒಂದು ಕೋಟಿ ರೂ. ಬೆಲೆ ಬಾಳುವ ಪ್ರತಿಷ್ಠಿತ ಕಂಪೆನಿಗಳ ಹೆಸರಿನ ನಕಲಿ ಮೊಬೈಲ್ ಅಕ್ಸೆಸರಿಸ್ಗಳನ್ನು ಮತ್ತು ಬ್ಲೂಟೂಥ್ ಸ್ಪೀಕರ್, ನಕಲಿ ಇಯರ್ ಫೋನ್ಗಳು ಇನ್ನಿತರ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಎಸ್ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕಾರ್ಯಾಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.
