ಸಿಸಿಬಿ ಪೊಲೀಸರ ಕಾರ್ಯಾಚರಣೆ 8 ಮಂದಿ ಪೆಡ್ಲರ್‌ಗಳ ಬಂಧನ, 75 ಲಕ್ಷ ಮೌಲ್ಯದ ಡ್ರಗ್ಸ್ ವಶ

Social Share

ಬೆಂಗಳೂರು, ಫೆ.8- ನಗರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಟು ಮಂದಿ ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ ಸುಮಾರು 75 ಲಕ್ಷ ಬೆಲೆಬಾಳುವ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಡ್ರಗ್ ಪೆಡ್ಲರ್‍ಗಳ ವಿರುದ್ಧ ಕಾರ್ಯಾಚರಣೆ ಮುಂದುವರೆಸಿ ಆರ್‍ಎಂಸಿ ಯಾರ್ಡ್ ಮತ್ತು ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದಾಳಿ ನಡೆಸಿದೆ.
ಈ ವ್ಯಾಪ್ತಿಗಳಲ್ಲಿ ಎಂಡಿಎಂಎ ಕ್ರಿಸ್ಟಲ್ ಹಾಗೂ ಎಲ್‍ಎಸ್‍ಡಿ ಪೇಪರ್ಸ್ ಬ್ಲಾಟ್ಸ್‍ಗಳನ್ನು ಡಾರ್ಕ್ ವೆಬ್‍ಸೈಟ್‍ನಲ್ಲಿರುವ ವೆಂಡರ್‍ಗಳಾದ ಬ್ಲಾಟರ್ ಡ್ಯಾಡಿ, ವೆಗೆಟರ್‍ನಲ್ಲಿ ಬಿಟ್ ಕಾಯಿನ್ ಮೂಲಕ ಹಣವನ್ನು ಪಾವತಿಸಿ ಮಾದಕ ವಸ್ತುಗಳನ್ನು ಡ್ರಗ್ ಪೆಡ್ಲರ್‍ಗಳು ಖರೀದಿಸಿದ್ದಾರೆ. ಆ ಮಾದಕ ವಸ್ತುಗಳನ್ನು ತಮ್ಮ ವಶದಲ್ಲಿ ಶೇಖರಿಸಿಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದಿಸಲು ಯತ್ನಿಸುತ್ತಿದ್ದ ಡ್ರಗ್ ಪೆಡ್ಲರ್‍ಗಳ ಬಗ್ಗೆ ಈತ ತಂಡ ಮಾಹಿತಿ ಸಂಗ್ರಹಿಸಿದೆ.
ಏಕಕಾಲದಲ್ಲಿ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳ ತಂಡ ಎಂಟು ಮಂದಿ ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ 1 ಕೆಜಿ ತೂಕದ ಎಂಡಿಎಂಎ ಕ್ರಿಸ್ಟಲ್ ಹಾಗೂ 183 ಎಲ್‍ಎಸ್‍ಡಿ ಪೇಪರ್ ಬ್ಲಾಟ್ಸ್, 9 ಮೊಬೈಲ್, ಹಣ, ಎಲೆಕ್ಟ್ರಾನಿಕ್ ತೂಕದ ಯಂತ್ರಗಳು ಹಾಗೂ ಪ್ಯಾಕಿಂಗ್ ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಇವುಗಳ ಒಟ್ಟು ಅಂದಾಜು ಮೌಲ್ಯ 75 ಲಕ್ಷ ರೂ.ಗಳಾಗಿರುತ್ತದೆ. ಈ ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ, ಪರಿಚಯಸ್ಥ ಗಿರಾಕಿಗಳಿಗೆ, ಮಾದಕ ವ್ಯಸನಿಗಳಿಗೆ ಹಾಗೂ ಐಟಿಬಿಟಿ ಉದ್ಯೋಗಿಗಳಿಗೆ ಸರಬರಾಜು ಮಾಡಿ ಹೆಚ್ಚಿನ ಹಣ ಗಳಿಸುತ್ತಿದುದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡ್ರಗ್ ಪೆಡ್ಲರ್‍ಗಳ ವಿರುದ್ಧ ಆರ್‍ಎಂಸಿ ಯಾರ್ಡ್ ಮತ್ತು ಬಂಡೆಪಾಳ್ಯ ಪೊಲೀಸ್ ಠಾಣೆಗಳಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹದಳದ ಅಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡಿದೆ.
# ಅಕ್ರಮ ವಾಸ:
ವೀಸಾ ಅವಧಿ ಮುಗಿದಿದ್ದರೂ ತಮ್ಮ ದೇಶಕ್ಕೆ ಮರಳದೆ ನಗರದಲ್ಲಿ ಅಕ್ರಮವಾಗಿ ವಿದೇಶಿ ಪ್ರಜೆಗಳು ವಾಸವಾಗಿದ್ದ ಮನೆಗಳ ಮೇಲೆ ನಿನ್ನೆ ಸಂಜೆ ಸಿಸಿಬಿ ಪೊಲೀಸರು ದಾಳಿ ಮಾಡಿ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ನಗರದಲ್ಲಿ ಮಾದಕ ವಸ್ತು ಸರಬರಾಜು ಮತ್ತು ಕಳ್ಳ ಸಾಗಾಣಿಕೆ ನಿಯಂತ್ರಿಸುವ ಸಲುವಾಗಿ ಸಿಸಿಬಿ ಪೋಲೀಸರು ಹೆಚ್ಚಿನ ನಿಗಾ ವಹಿಸಿದ್ದು, ನಿನ್ನೆ ಸಂಜೆ ನೂರಕ್ಕೂ ಹೆಚ್ಚು ಪೋಲೀಸರು ಶ್ವಾನದಳದೊಂದಿಗೆ 43 ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ 27 ಮಂದಿ ವಿದೇಶಿ ಪ್ರಜೆಗಳ ಬಳಿ ಪಾಸ್‍ಪೋರ್ಟ್ ಹಾಗೂ ವೀಸಾ ಇಲ್ಲದಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ಕಾಯ್ದಿರಿಸುವ ಸ್ಥಳಕ್ಕೆ ಅವರನ್ನು ಕಳುಹಿಸಿದ್ದಾರೆ. ನಗರದಲ್ಲಿ ವಿದೇಶಿ ಪ್ರಜೆಗಳು ಡ್ರಗ್ಸ್ ಮಾರಾಟದಲ್ಲಿ ಶಾಮೀಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದಾರೆ.

Articles You Might Like

Share This Article