ಬೆಂಗಳೂರು,ಸೆ.28- ಸಲೂನ್ ಅಂಡ್ ಸ್ಪಾಗಳಿಗೆ ಹೋಗಿ ಮ್ಯಾನೇಜರ್‍ಗಳಿಗೆ ತಾನು ಸಿಸಿಬಿ ಪೊಲೀಸ್, ಪ್ರತಿ ತಿಂಗಳು ಹಣ ಕೊಡದಿದ್ದರೆ ಸ್ಪಾ ಮೇಲೆ ರೇಡ್ ಮಾಡಿಸುತ್ತೇನೆಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಅಗ್ನಿಶಾಮಕ ಸಿಬ್ಬಂದಿಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಆನಂದ್ ಬಂಧಿತ.
ಈತನಿಂದ ನಾಲ್ಕು ಮೊಬೈಲ್ ಗಳು ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆ.8ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಆರೋಪಿ ಆನಂದ್ ಸ್ಪಾ ಬಳಿ ಬಂದು ಸ್ಪಾ ಮ್ಯಾನೇಜರ್‍ರವರಿಗೆ ತಾನು ಸಿಸಿಬಿ ಪೊಲೀಸ್ ತನಗೆ ಮಂತ್ಲಿ ಕೊಡಬೇಕು ಇಲ್ಲವಾದಲ್ಲಿ ನಿಮ್ಮ ಸ್ಪಾ ಮೇಲೆ ರೇಡ್ ಮಾಡುತ್ತೇನೆಂದು ಹೆದರಿಸಿ 25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ.
ನಂತರ 20 ಸಾವಿರ ಹಣವನ್ನು ಪಡೆದುಕೊಂಡು ಮುಂದಿನ ತಿಂಗಳು ಸಹ ಬರುತ್ತೇನೆ ಮಾಮೂಲಿ ಕೊಡಬೇಕೆಂದು ಹೇಳಿ ಆತನ ಮೊಬೈಲ್ ನಂಬರ್‍ನ್ನು ಕೊಟ್ಟು ಹೋಗಿದ್ದನು. ಅಷ್ಟೇ ಅಲ್ಲದೆ ವಿದ್ಯಾರಣ್ಯಪುರದ ಮತ್ತೊಂದು ಸಲೂನ್ ಮತ್ತು ಸ್ಪಾಗೆ ಸಹ ಹೋಗಿ ತಾನು ಸಿಸಿಬಿ ಪೊಲೀಸ್, ಸ್ಪಾ ಮೇಲೆ ರೇಡ್ ಮಾಡಿಸುತ್ತೇನೆಂದು ಹೆದರಿಸಿ ಅವರಿಂದಲೂ ಸಹ ಹಣ ಪಡೆದುಕೊಂಡು ಹೋಗಿರುವ ವಿಚಾರವಾಗಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿ ದ್ದರು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಕೊಡಿಗೆಹಳ್ಳಿ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ. ತನಿಖಾ ಸಂದರ್ಭದಲ್ಲಿ ಆರೋಪಿ ಇದೇ ರೀತಿ ವಿದ್ಯಾರಣ್ಯಪುರದ ಇನ್ನೂ ಎರಡು ಕಡೆಗಳಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಒಂದು ಸ್ಪಾ ಮತ್ತು ಸಲೂನ್‍ಗಳಲ್ಲಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಕೊಡಿಗೆಹಳ್ಳಿ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಎನ್.ರಾಜಣ್ಣ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.