ಕ್ಲಬ್,ಪ್ಲಬ್ನ ಡಿಜೆ, ಮ್ಯಾನೇಜರ್, ಗಾರ್ಡ್ಗಳಿಂದ ಮಾಹಿತಿ ಸಂಗ್ರಹಿಸಿದ ಸಿಸಿಬಿ
ಬೆಂಗಳೂರು,ಸೆ.18- ಡ್ರಗ್ಸ್ ಜಾಲವನ್ನು ಬೇಧಿಸುತ್ತಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಪಾರ್ಟಿ ಹಾಗೂ ಪಬ್ಗಳ ಮ್ಯಾನೇಜರ್, ಸೆಕ್ಯೂರಿಟಿ ಗಾರ್ಡ್ಗಳು ಹಾಗೂ ಡಿಜೆಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿರುವ ಪ್ರಮುಖ ಪಬ್ಗಳ ಪಟ್ಟಿ ತಯಾರಿಸಿರುವ ಸಿಸಿಬಿ ಪೊಲೀಸರು, ಪಾರ್ಟಿ ನಡೆಯು ತ್ತಿದ್ದ ಸ್ಥಳಗಳು ಹಾಗೂ ರೇವೂ ಪಾರ್ಟಿಗಳ ಸ್ಥಳ ಗುರುತಿಸಿ ಪಟ್ಟಿ ಮಾಡಿ ಅಲ್ಲಿ ಕೆಲಸ ಮಾಡುವಂತಹ ಮ್ಯಾನೇಜರ್ಗಳು, ಸೆಕ್ಯೂರಿಟಿಗಾರ್ಡ್ಗಳು ಹಾಗೂ ಡಿಜೆಗಳನ್ನು ವಿಚಾರಣೆಗೊಳಪಡಿಸಿದ್ದಾರೆ.
ಪಬ್ಗಳಲ್ಲಿ ಎಷ್ಟು ಗಂಟೆಗೆ ಪಾರ್ಟಿ ನಡೆಯುತ್ತಿತ್ತು. ಯಾರ್ಯಾರು ಪಾರ್ಟಿಗೆ ಬರುತ್ತಿದ್ದರು, ನಟನಟಿಯರು ಬರುತ್ತಿದ್ದರೇ, ಗಣ್ಯರ ಮಕ್ಕಳು ಬರುತ್ತಿದ್ದರೇ, ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆಗುತ್ತಿತ್ತ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇದಲ್ಲದೆ ರೇವಾ ಪಾರ್ಟಿಗಳ ಮ್ಯಾನೇಜರ್ ಮತ್ತು ಸೆಕ್ಯೂರಿಟಿ ಗಾರ್ಡ್ಗಳಿಂದ ಹಲವು ಮಾಹಿತಿಗಳನ್ನು ಸಿಸಿಬಿ ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
ಈಗಾಗಲೇ ಪೊಲೀಸರು ಡ್ರಗ್ ಪೆಡ್ಲರ್ಗಳು, ಪಾರ್ಟಿ ಆಯೋಜಕರು ಹಾಗೂ ಇಬ್ಬರು ನಟಿಯರು ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ. ಈ ನಡುವೆ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಅವರನ್ನು ಸಿಸಿಬಿ ಪೊಲೀಸರು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ತಲೆಮರೆಸಿಕೊಂಡಿರುವ ಆದಿತ್ಯ ಆಳ್ವ, ಶೇಖ್ ಫಾಝಿಲ್, ಶಿವಪ್ರಕಾಶ್ ಬಂಧನಕ್ಕೂ ಸಹ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.