ಸಿಡಿ ಮೂಲ ಪತ್ತೆಗೆ ಮುಂದುವರೆದ ಎಸ್‍ಐಟಿ ಶೋಧ

ಬೆಂಗಳೂರು,ಏ .3- ಸಿಡಿ ಬಹಿರಂಗಗೊಂಡ ಮೂಲ ಪತ್ತೆ ಹಚ್ಚಲು ಎಸ್‍ಐಟಿ ಪೊಲೀಸರು ಹಲವು ದೃಷ್ಟಿಕೋನಗಳಲ್ಲಿ ತೀವ್ರ ಸ್ವರೂಪದ ತನಿಖೆ ನಡೆಸುತ್ತಿದ್ದಾರೆ. ದೂರುದಾರರಾದ ಯುವತಿಯಿಂದ ನಾಲ್ಕು ದಿನಗಳಿಂದ ನಿರಂತರವಾಗಿ ಮಾಹಿತಿ ಪಡೆದಿದ್ದು, ಐದನೆ ದಿನ ಕೂಡ ವಿಚಾರಣೆ ಮುಂದುವರೆಸಿದ್ದಾರೆ. ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿ ಹೊಳಿ ಅವರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ನೋಟಿಸ್ ಜಾರಿ ಮಾಡಿದೆ.

ಇಡೀ ಪ್ರಕರಣದಲ್ಲಿ ಅತ್ಯಂತ ಮಹತ್ವದ ಘಟ್ಟ ಎಂದರೆ ಅದು ಸಿಡಿ ಬಹಿರಂಗವಾದ ಸಂದರ್ಭವಾಗಿದೆ. ಎಲ್ಲಿಂದ, ಯಾವಾಗ, ಯಾರಿಂದ ವಿವಾದಿತ ಸಿಡಿ ಬಹಿರಂಗವಾಯಿತು ಎಂಬ ಪ್ರಶ್ನೆಗೆ ಈವರೆಗೂ ಕರಾರುವಕ್ಕಾದ ಉತ್ತರ ಸಿಕ್ಕಿಲ್ಲ. ದೂರುದಾರರಾದ ಯುವತಿ ನನ್ನ ಮಾನ, ಮರ್ಯಾದೆ ಹೋಗಿದೆ. ರಮೇಶ್ ಜಾರಕಿಹೊಳಿ ಅವರೇ ಇದನ್ನೆಲ್ಲಾ ಮಾಡಿದ್ದಾರೆ. ವಿಡಿಯೋ ಕೂಡ ಅವರೇ ಬಹಿರಂಗ ಪಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇತ್ತ ರಮೇಶ್ ಜಾರಕಿಹೊಳಿ ಅವರು, ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ. ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಿ ಎಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಡಿ ಬಿಡುಗಡೆಯಾದ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಸಹೋದರರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಭಾರತದಲ್ಲಷ್ಟೇ ಅಲ್ಲಾ ಸಿಂಗಾಪುರ, ರಷ್ಯಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಏಕಕಾಲಕ್ಕೆ ಸಿಡಿಯ ದೃಶ್ಯಾವಗಳಿಗಳು ಅಂತರ್ಜಾಲಕ್ಕೆ ಅಪ್‍ಲೋಡ್ ಆಗಿದೆ. ಇದು ಭಾರೀ ಪ್ರಮಾಣದ ಷಡ್ಯಂತ್ರ ಎಂದು ಆರೋಪ ಮಾಡಿದ್ದರು.

ಎಸ್‍ಐಟಿ ಪೆÇಲೀಸರು ದೂರುದಾರರು ಮತ್ತು ಪ್ರತಿವಾದಿಯವರ ಆರೋಪ-ಪ್ರತ್ಯಾರೋಪಗಳ ಬಗ್ಗೆ ವಿಚಾರಣೆ ನಡೆಸುವ ಜತೆಗೆ ಸಿಡಿಯ ಮೂಲ ಪತ್ತೆಹಚ್ಚುವ ನಿಟ್ಟಿನಲ್ಲೂ ಕೂಡ ಹಗಲಿರುಳು ಶ್ರಮಿಸುತ್ತಿದ್ದಾರೆ. ಐಟಿ ಕಾಯ್ದೆಯ ಪ್ರಕಾರ ವಿಡಿಯೋವನ್ನು ತಿರುಚುವುದು ಮತ್ತು ಆಕ್ಷೇಪಾರ್ಹವಾಗಿ ಬಹಿರಂಗಪಡಿಸುವುದು ಅಪರಾಧವಾಗಿದೆ. ಈ ಅಪರಾಧದ ವಿಚಾರ ಕುರಿತಂತೆ ಕೂಡ ತನಿಖೆ ನಡೆಸುವ ಅಗತ್ಯವಿದೆ. ಹೀಗಾಗಿ ಎಸ್‍ಐಟಿ ಪೊಲೀಸರು ವಿಡಿಯೋ ಬಹಿರಂಗವಾದ ಮೂಲ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಯುವತಿ ಸ್ವ ಪ್ರೇರಣೆಯಿಂದ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ ದಿನದಿಂದ ಹಂತ ಹಂತವಾಗಿ ವಿಚಾರಣೆ ಮುಂದುವರೆದಿದೆ. ಸ್ಥಳ ಮಹಜರು ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಕಾನೂನಾತ್ಮಕವಾಗಿ ಪೂರ್ಣಗೊಳಿಸಲಾಗಿದೆ. ನಿನ್ನೆ 5 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಇಂದು ಐದನೇ ದಿನ ಕೂಡ ಯುವತಿ ವಿಚಾರಣೆ ಮುಂದುವರೆದಿದೆ.
ರಮೇಶ್ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಅನಾರೋಗ್ಯದಿಂದಾಗಿ ವಿಚಾರಣೆಗೆ ಹಾಜರಾಗಲು ಆಗುತ್ತಿಲ್ಲ ಎಂದು ವಕೀಲರ ಮೂಲಕ ತಿಳಿಸಿದ್ದರು.

ಅದೇ ವಕೀಲರ ಮೂಲಕ ಮತ್ತೊಂದು ನೋಟಿಸ್ ನೀಡಿರುವ ಎಸ್‍ಐಟಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ ಎಂದು ತನಿಖಾ ದಳದ ಹಿರಿಯ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.