ಬೆಂಗಳೂರು,ಫೆ.4- ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದೆ. ಹಣಕಾಸು ನಿರ್ವಹಣೆಗಾಗಿ ಹೆಚ್ಚಾಗಿ ಕೇಂದ್ರದ ಅನುದಾನವನ್ನೇ ನೆಚ್ಚಿಕೊಂಡಿದೆ. ದುರಂತವೆಂದರೆ ಕೇಂದ್ರದಿಂದ ಹಂಚಿಕೆ ಯಾದ ಅನುದಾನ ಬಿಡುಗಡೆಗೆ ಕತ್ತರಿ ಬಿದ್ದಿದೆ. ಕೊರೊನಾ ಲಾಕ್ಡೌನ್ನಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಮಂಡಿಯೂರಿದೆ. ತೆರಿಗೆ ಮೂಲಗಳು ಬರಿದಾಗಿರುವುದರಿಂದ ಬೊಕ್ಕಸ ಖಾಲಿ ಹೊಡೆಯುತ್ತಿದೆ. ಇದರಿಂದ ರಾಜ್ಯಕ್ಕೆ ಬಜೆಟ್ ಅನುಷ್ಠಾನವೇ ಕಷ್ಟಸಾಧ್ಯವಾಗುತ್ತಿದೆ.
ಆದಾಯ ಕೊರತೆಯಿಂದ ಅಭಿವೃದ್ಧಿ ಕಾಮಗಾರಿಗೂ ಹಣದ ಕೊರತೆ ಎದುರಾಗಿದೆ. ರಾಜ್ಯದ ಪಾಲಿಗೆ ಕೇಂದ್ರ ಸರ್ಕಾರದಿಂದ ಕೊಡಮಾಡುವ ಅನುದಾನ ದೊಡ್ಡ ಸಂಪನ್ಮೂಲವಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಪಾಲು ಹಾಗೂ ಸಹಾಯಾನುದಾನ ಹಂಚಿಕೆಯಾಗುತ್ತದೆ. ಈ ಅನುದಾನಗಳೇ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಬಹುಪಾಲು ಬಳಸಲಾಗುತ್ತದೆ.
ಕೇಂದ್ರದಿಂದ ಬರುವ ಅನುದಾನಕ್ಕೆ ಎರಡು ವರ್ಷದಿಂದ ಕತ್ತರಿ ಬಿದ್ದಿದೆ. ರಾಜ್ಯದ ಪಾಲಿನ ಅನುದಾನದ ಪ್ರಮಾಣವನ್ನು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕಡಿತಗೊಳಿಸಲಾಗಿದೆ. ಕಡಿತಗೊಳಿಸಿರುವ ಕೇಂದ್ರದ ಅನುದಾನ ಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡುತ್ತಲೇ ಇದೆ. ಆದರೆ, ಅದಕ್ಕೆ ಕೇಂದ್ರ ಸರ್ಕಾರ ಈವರೆಗೆ ಸೊಪ್ಪು ಹಾಕಿಲ್ಲ. ಈ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಹಂಚಿಕೆಯಾದ ಕೇಂದ್ರದ ಅನುದಾನ ಬಿಡುಗಡೆ ವಿಳಂಬವಾಗಿದೆ.
ಕೇಂದ್ರದ ಅನುದಾನ ಬಿಡುಗಡೆಗೆ ಕತ್ತರಿ:
ಕೇಂದ್ರ ಸರ್ಕಾರ ಹಂಚಿಕೆ ಮಾಡುವ ಅನುದಾನ ರಾಜ್ಯದ ಬೊಕ್ಕಸಕ್ಕೆ ಅತಿ ದೊಡ್ಡ ಕೊಡುಗೆಯಾಗಿದೆ. ರಾಜ್ಯದ ಬಜೆಟ್ ಅನುಷ್ಠಾನದಲ್ಲಿ ಬಹುವಾಗಿ ಕೇಂದ್ರದ ಅನುದಾನ ಬಳಕೆಯಾಗುತ್ತದೆ. ಆದರೆ, ಆರ್ಥಿಕ ಸಂಕಷ್ಟದಿಂದ ಬಜೆಟ್ ಅನುಷ್ಠಾನದಲ್ಲಿ ಆಯಾಸಪಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರದ ಅನುದಾನ ಬಿಡುಗಡೆಗೆ ಕತ್ತರಿ ಬಿದ್ದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮೊದಲೇ ರಾಜ್ಯದ ಪಾಲಿನ ಕೇಂದ್ರದ ಅನುದಾನ ಹಂಚಿಕೆ ಕಡಿತವಾಗಿದೆ. ಈ ಮಧ್ಯೆ ಹಂಚಿಕೆಯಾದ ಅನುದಾಮವನ್ನೂ ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರ ಮೀನಾಮೇಷ ನೋಡುತ್ತಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕೇಂದ್ರದ ಅನುದಾನವನ್ನು ಬೇಗ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡುತ್ತಲೇ ಇದೆ. ಆದರೆ ಫಲಿತಾಂಶ ಮಾತ್ರ ಶೂನ್ಯ.ಆರ್ಥಿಕ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ 2021-22 ಸಾಲಿನಲ್ಲಿ ಕರ್ನಾಟಕಕ್ಕೆ 24,273 ಕೋಟಿ ರೂ. ಕೇಂದ್ರದ ತೆರಿಗೆ ಹಂಚಿಕೆಯಾಗಿದೆ. ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ 16,423 ಕೋಟಿ ಮಾತ್ರ ಬಿಡುಗಡೆಯಾಗಿದೆ.
ಅಂದರೆ ಕೇವಲ ಶೇ.67 ಮಾತ್ರ ಹಣ ಬಿಡುಗಡೆಯಾಗಿದೆ. ಇನ್ನೂ 7,850 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಇತ್ತ 2021-22 ಸಾಲಿನಲ್ಲಿ ಕರ್ನಾಟಕಕ್ಕೆ 28,246 ಕೋಟಿ ರೂ. ಕೇಂದ್ರದ ಸಹಾಯಾನುದಾನ ಹಂಚಿಕೆಯಾಗಿದೆ. ಈ ಪೈಕಿ ಈವರೆಗೆ 15,149.21 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಇನ್ನು ಜಿಎಸ್ಟಿ ನಷ್ಟ ಪರಿಹಾರ ರೂಪದಲ್ಲಿ 3,000 ಕೋಟಿ ರೂ. ಸಹಾಯಾನುದಾನ ಬಿಡುಗಡೆ ಯಾಗಿದೆ. ಅದೂ ಸೇರಿ ಒಟ್ಟು 19,738 ಕೋಟಿ ರೂ. ಸಹಾಯಾನುದಾನ ಬಿಡುಗಡೆ ಮಾಡಲಾಗಿದೆ.
ಅಂದರೆ ಶೇ.69 ಹಣ ಬಿಡುಗಡೆಯಾಗಿದೆ. ಇನ್ನೂ 8,508 ಕೋಟಿ ರೂ. ಹಣ ಬಿಡುಗಡೆ ಯಾಗಬೇಕಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ. ಈಗಾಗಲೇ ಸಂಪನ್ಮೂಲಕ್ಕಾಗಿ ಪರದಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರದ ಅನುದಾನ ಬಿಡುಗಡೆಯಲ್ಲಿನ ವಿಳಂಬ ಭಾರೀ ಆರ್ಥಿಕ ಹೊರೆ ಬೀಳುವಂತೆ ಮಾಡಿದೆ.
