ಮುಂಬೈ, ಫೆ.24- ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ ಬೆನ್ನಲ್ಲೇ, ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಹರಿ ಹಾಯ್ದಿದ್ದು, ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿ ವಿರೋಧಿಗಳನ್ನು ಮಟ್ಟ ಹಾಕಲು ಮಾಫಿಯಾದಂತೆ ಅಕಾಡಕ್ಕಿಳಿದಿವೆ ಎಂದು ಕಿಡಿಕಾರಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆಯ ವಕ್ತಾರ ಸಂಜಯ್ ರಾವುತ್, ಇಡಿ ಅಧಿಕಾರಿಗಳು ಮಲಿಕ್ ಅವರನ್ನು ವಿಚಾರಣೆಗಾಗಿ ಅವರ ಮನೆಯಿಂದ ಕರೆದೊಯ್ದರು. ಇದು ಮಹಾರಾಷ್ಟ್ರ ಸರಕಾರಕ್ಕೆ ಸವಾಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ಮಾಫಿಯಾದಂತೆ, ಸುಳ್ಳನ್ನು ಬಯಲಿಗೆಳೆಯುವ ಬಿಜೆಪಿಯ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸುತ್ತಿವೆ. ಆದರೆ, ಸತ್ಯವು ಮೇಲುಗೈ ಸಾಧಿಸುತ್ತದೆ ಮತ್ತು ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾರೆ.
ಹಳೆಯ ಪ್ರಕರಣಗಳನ್ನು ಅಗೆಯುವ ಮೂಲಕ ವ್ಯಕ್ತಿಗಳನ್ನು ಗುರಿಯಾಗಿಸುವುದು 2024 ರವರೆಗೆ ಮುಂದುವರಿಯುತ್ತದೆ ಮತ್ತು ಅದರ ನಂತರ ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಪ್ರೇರಿತವಾಗಿ ಕೇಂದ್ರ ಸರ್ಕಾರಗಳ ಏಜೆನ್ಸಿಗಳು ಮುಸುಕಿನ ದಾಳಿ ನಡೆಸುತ್ತಿವೆ. ಕೆಲವು ವರ್ಷಗಳ ಹಿಂದೆ ಬಿಜೆಪಿಯ ಮಾಜಿ ಸಂಸದ ಕಿರೀಟ್ ಸೋಮಯ್ಯ ಅವರು ಬಿಜೆಪಿಯ ಕೆಲ ನಾಯಕರ ವಿರುದ್ಧ ದೂರು ದಾಖಲಿಸಿದ್ದರು.
ಆದರೆ ಅದರ ವಿಚಾರಣೆ ಯಾಕೆ ನಡೆಯುತ್ತಿಲ್ಲ, ಸಮನ್ಸ್ ಕೂಡ ಜಾರಿ ಮಾಡದಿರುವುದು ಏಕೆ ? ತಾವು ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಎಲ್ಲಾ ಹಿರಿಯ ನಾಯಕರೊಂದಿಗೆ ಮಾತನಾಡಿದ್ದು, ಶೀಘ್ರದಲ್ಲೇ ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗವನ್ನು ಮತ್ತಷ್ಟು ಪುರಾವೆಗಳ ಜೊತೆ ಬಹಿರಂಗಪಡಿಸುತ್ತೇವೆ ಎಂದು ರಾವುತ್ ಹೇಳಿದರು.
ಮುಂಬೈ ಭೂಗತ ಲೋಕದ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ರನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
62 ವರ್ಷದ ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ಬೆಳಗ್ಗೆ 8 ಗಂಟೆಗೆ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
