ಬೆಡ್ ಕಾಯ್ದಿರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

Spread the love

ದೆಹಲಿ, ಏ.16- ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿನ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಸೂಚನೆ ನೀಡಿದ್ದು, ಅವುಗಳನ್ನು ಬಳಸಿಕೊಳ್ಳಲು ರಾಜ್ಯಗಳಿಗೆ ಸಲಹೆ ನೀಡಿದೆ. ಕಳೆದ ವಾರದಿಂದೀಚೆಗೆ ಕೊರೊನಾ ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿದ್ದು, ಅದನ್ನು ಎದುರಿಸಲು ಒಕ್ಕೂಟ ವ್ಯವಸ್ಥೆಯೊಂದಿಗೆ ಶ್ರಮಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕ ಉದ್ದಿಮೆಗಳ ಅಧೀನದಲ್ಲಿರುವ ಆಸ್ಪತ್ರೆಗಳು, ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‍ಗಳನ್ನು ಸ್ಥಾಪಿಸಬೇಕು ಎಂದು ಸೂಚನೆ ನೀಡಲಾಗಿದೆ.

ಆ ವಾರ್ಡ್‍ಗಳಲ್ಲಿ ಕೋವಿಡ್ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು. ಪ್ರವೇಶ ಮತ್ತು ನಿರ್ಗಮನಕ್ಕೆ ಬೇರೆಯೇ ದ್ವಾರ ಹೊಂದಿರಬೇಕು. ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಆಕ್ಸಿಜನ್, ಐಸಿಯು ಮತ್ತು ವೆಂಟಿಲೇಟರ್ ಸೌಕರ್ಯಗಳನ್ನು ಕಲ್ಪಿಸಬೇಕು. ಅಡುಗೆ ಕೋಣೆ, ಲಾಂಡರಿ, ಪ್ರಯೋಗಾಲಯ, ಸ್ಕ್ಯಾನಿಂಗ್ ಸೇರಿದಂತೆ ಅಗತ್ಯವಿರುವ ಸೇವೆಗಳನ್ನು ಒದಗಿಸಲು ಆರೋಗ್ಯ ರಕ್ಷಣಾ ಕಾರ್ಯಪಡೆ ಜತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಲಾಗಿದೆ.

ಈ ಬಗ್ಗೆ ಕೇಂದ್ರ ಸಚಿವಾಲಯಗಳಿಗೆ, ಕೇಂದ್ರ ಆರೋಗ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದ್ದು, ರಾಜ್ಯ ಸರ್ಕಾರಗಳಿಗೆ ಕೋವಿಡ್ ನಿಯಂತ್ರಣ ಕೇಂದ್ರಗಳನ್ನು ಹಸ್ತಾಂತರಿಸುವಂತೆ ತಿಳಿಸಲಾಗಿದೆ.

Facebook Comments