ಪ್ರವಾಹದಿಂದಾದ ನಷ್ಟ ಪರಿಶೀಲನೆಗೆ ರಾಜ್ಯಕ್ಕಾಗಮಿಸುತ್ತಿದೆ ಕೇಂದ್ರ ಅಧ್ಯಯನ ತಂಡ

ಬೆಂಗಳೂರು : ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಪರಿಶೀಲನೆಗಾಗಿ ಕೇಂದ್ರದ ಅಧ್ಯಯನ ತಂಡ ಎರಡು ಮೂರು ದಿನಗಳಲ್ಲಿ ಕರ್ನಾಟಕಕ್ಕೆ ಭೇಟಿ ನೀಡಲಿದೆ.

ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಗೃಹ ಸಚಿವಾಲಯದ ಜಂಟಿ ನಿರ್ದೇಶಕ ಕೆ.ಬಿ ಪ್ರತಾಪ ನೇತೃತ್ವದ ಆರು ಜನ ಅಧಿಕಾರಿಗಳ ತಂಡ ರಾಜ್ಯಕ್ಕೆ ಆಗಮಿಸಲಿದೆ. ಈ ತಂಡ ಮೂರು ನಾಲ್ಕು ದಿನ ನೆರೆ ಪೀಡಿತ ಪ್ರದೇಶಗಳಿಗೆ ಪ್ರವಾಸ ನಡೆಸಿ, ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಪರ ಸರ್ಕಾರ ನಿಲ್ಲಲಿದೆ. ಯಾವುದೇ ಆರ್ಥಿಕ ಸಮಸ್ಯೆ ಎದುರಾದರೂ ಸರ್ಕಾರ ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ಕೊಡಲು ಹಿಂದೇಟು ಹಾಕಲ್ಲ.

ನೆರೆ ಪರಿಸ್ಥಿತಿ ನಿರ್ವಹಣೆಗೆ ಹಣದ ಕೊರತೆ ಇಲ್ಲ, ಕಾಮಗಾರಿಗಳಿಗಾಗಿ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗೆ 947 ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಸಚಿವ ಅಶೋಕ, ಎನ್‌ಡಿಆರ್‌ಎಫ್‌ನಡಿ ರಾಜ್ಯಕ್ಕೆ 2ನೇ ಕಂತಿನಡಿ 395 ಕೋಟಿ ರೂ.ಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಹೊಸದಾಗಿ ಐದು ತಂಡ ಸೇರಿ ರಾಜ್ಯಕ್ಕೆ ಒಟ್ಟು ಒಂಬತ್ತು ಎನ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ಕೇಂದ್ರ ತಂಡದ ಭೇಟಿಯ ನಂತರ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿ ಪ್ರವಾಹ ಪರಿಹಾರ ಹಣಕ್ಕೆ ಮನವಿ ಮಾಡಲಿದ್ದಾರೆ.

ಕಳೆದ ವಾರವೇ ಸಿಎಂ ದೆಹಲಿಗೆ ಹೋಗಬೇಕಿತ್ತು, ಆದರೆ ಕೇಂದ್ರ ಅಧ್ಯಯನ ತಂಡ ಭೇಟಿಯ ನಂತರ ದೆಹಲಿಗೆ ತೆರಳಲು ಸಿಎಂ ನಿರ್ಧರಿಸಿದರು ಎಂದು ಹೇಳಲಾಗಿದೆ.

ಪ್ರವಾಹದಿಂದಾಗಿ 43,827 ಹೆಕ್ಟೇರ್ ಕೃಷಿ ಭೂಮಿ ಮತ್ತು 48696 ಹೆಕ್ಟೇರ್ ತೋಟಗಾರಿಕಾ ಭೂಮಿ ಹಾನಿಗೊಳಗಾಗಿದೆ ಎಂಬ ಮಾಹಿತಿಯನ್ನು ಕೇಂದ್ರದ ಮಂತ್ರಿಗಳಿಗೆ ಸಿಎಂ ತಿಳಿಸಲಿದ್ದಾರೆ, ಮಳೆಯಿಂದಾಗಿ ರಾಜ್ಯದಲ್ಲಿ 10 ಸಾವಿರ ಕೋಟಿ ರು ನಷ್ಟವಾಗಿದ್ದು, ಕೇಂದ್ರ ಸರ್ಕಾರದಿಂದ 4 ಸಾವಿರ ಕೋಟಿ ರು ಪರಿಹಾರ ಕೋರಲಾಗಿದೆ.

Sri Raghav

Admin