ನವದೆಹಲಿ,ಜು.15- ಕರ್ನಾಟಕದ ಉಡುಪಿ ಮತ್ತು ತುಮಕೂರಿನಲ್ಲಿ 100 ಹಾಸಿಗೆ ಸಾಮಥ್ರ್ಯವುಳ್ಳ ಎರಡು ಇಎಸ್‍ಐ ಆಸ್ಪತ್ರೆಯನ್ನು ತೆರೆಯಲು ಕೇಂದ್ರ ಸರ್ಕಾರ ಇಂದು ತಾತ್ವಿಕ ಅನುಮೋದನೆ ನೀಡಿದೆ. ಉಡುಪಿ ಹಾಗೂ ತುಮಕೂರಿನಲ್ಲಿ ಸುಮಾರು ನೂರು ಹಾಸಿಗೆ ಸಾಮಥ್ರ್ಯ ಈ ಎರಡೂ ಆಸ್ಪತ್ರೆಗಳನ್ನು ಆರಂಭಿಸಲು ಅಗತ್ಯವಿರುವ ಜಮೀನುಗಳನ್ನು ಒದಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ತೆಗೆದಕೊಳ್ಳಬೇಕೆಂದು ಕೇಂದ್ರದ ಕಾರ್ಮಿಕ ಇಲಾಖೆ ಸೂಚನೆ ನೀಡಿದೆ.
ದೇಶಾದ್ಯಂತ ಕಾರ್ಮಿಕ ಇಲಾಖೆ ವತಿಯಿಂದ 23 ಇಎಸ್‍ಐ ಆಸ್ಪತ್ರೆಗಳನ್ನು ತೆರೆಯಲು ಕಳೆದ ತಿಂಗಳು ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನಿಸಿತ್ತು. ಇದರಂತೆ ಇಂದ ಈ ಆಸ್ಪತ್ರೆಗಳನ್ನು ತೆರೆಯಲು ತಾತ್ವಿಕ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ಕರ್ನಾಟಕದ ಉಡುಪಿ ಮತ್ತು ತುಮಕೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ಉತ್ತಮ ಆರೋಗ್ಯ ಸೇವೆ ಕೊಡಬೇಕೆಂಬ ಸದುದ್ದೇಶದಿಂದ ಕಳೆದ ಬಜೆಟ್‍ನಲ್ಲಿ ಹಣಕಾಸು ಖಾತೆ ಹೊಂದಿರುವ ನಿರ್ಮಲ ಸೀತಾರಾಮನ್ ಅವರು 23 ಇಎಸ್‍ಐ ಆಸ್ಪತ್ರೆಗಳನ್ನು ದೇಶಾದ್ಯಂತ ತೆರೆಯುವುದಾಗಿ ಘೋಷಣೆ ಮಾಡಿದ್ದರು.
ಆದರೆ ಅವುಗಳನ್ನು ಎಲ್ಲೆಲ್ಲಿ ಪ್ರಾರಂಭಿಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿರಲಿಲ್ಲ. ಕಳೆದ ತಿಂಗಳು ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಎಸ್‍ಐ ಆಸ್ಪತ್ರೆಗಳನ್ನು ಅಗತ್ಯವಿರುವ ಕಡೆ ತೆರೆಯಲು ಕಾರ್ಮಿಕ ಇಲಾಖೆ ಸಚಿವರು ಮತ್ತು ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಇದರಂತೆ ಕರ್ನಾಟಕಕ್ಕೆ ಕನಿಷ್ಟ ಪಕ್ಷ ಮೂರು ಇಎಸ್‍ಐ ಆಸ್ಪತ್ರೆಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್‍ಗೆ ಮನವರಿಕೆ ಮಾಡಿದ್ದರು. ರಾಜ್ಯ ಸರ್ಕಾರದ ಮನವಿಯನ್ನು ಮನ್ನಿಸಿರುವ ಕಾರ್ಮಿಕ ಇಲಾಖೆ ರಾಜ್ಯಕ್ಕೆ ಎರಡು ಇಎಸ್‍ಐ ಆಸ್ಪತ್ರೆಗಳನ್ನು ಮಂಜೂರು ಮಾಡಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಉಡುಪಿ ಮತ್ತು ತುಮಕೂರಿನಲ್ಲಿ ಇಎಸ್‍ಐ ಆಸ್ಪತ್ರೆಗಳನ್ನು ಪ್ರಾರಂಭಿಸಬೇಕೆಂದು ಮನವಿ ಮಾಡಿಕೊಂಡಿದ್ದೆವು.
100 ಹಾಸಿಗೆಯುಳ್ಳ ಸಾಮಥ್ರ್ಯದ ಆಸ್ಪತ್ರೆಗಳನ್ನು ತೆರೆಯಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ರಾಜ್ಯ ಸರ್ಕಾರ ಈಗಾಗಲೇ ಅಗತ್ಯವಾದ ಜಮೀನು, ವಿದ್ಯುತ್, ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಬದ್ದವಾಗಿದೆ ಎಂದು ತಿಳಿಸಿದ್ದೆವು.
ಇದರಂತೆ ಕೇಂದ್ರ ಸರ್ಕಾರ ಈಗ ನಮಗೆ ಎರಡು ಆಸ್ಪತ್ರೆಗಳನ್ನು ಮಂಜೂರಾತಿ ಮಾಡಿದೆ. ಶೀಘ್ರದಲ್ಲೇ ಇದರ ಕಟ್ಟಡ ಕಾಮಗಾರಿ ಆರಂಭಿಸಲಿದೆ ಎಂದು ಕರಂದ್ಲಾಜೆ ಹೇಳಿದ್ದಾರೆ.